ಧಾರ್(ಮಧ್ಯಪ್ರದೇಶ) : ಇಲ್ಲಿನ ಗ್ರಾಮಸ್ಥರು ದೇವರೆಂದು ಪೂಜೆ ಮಾಡುತ್ತಿದ್ದ ದುಂಡಾಕಾರದ ಕಲ್ಲುಗಳನ್ನು ವಿಜ್ಞಾನಿಗಳು ಲಕ್ಷಾಂತರ ವರ್ಷಗಳ ಹಿಂದೆ ವಾಸವಿದ್ದ ಡೈನೋಸಾರ್ಗಳ ಮೊಟ್ಟೆಗಳೆಂದು ಪತ್ತೆ ಹಚ್ಚಿದ್ದಾರೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ನರ್ಮದಾ ಕಣಿವೆಯ ಅಂಚಿನಲ್ಲಿರುವ ಕುಕ್ಷಿ ತಹಸಿಲ್‌ನ ಪದಲ್ಯಾ ಎಂಬ ಗ್ರಾಮಸ್ಥರು, ಈ ದುಂಡಾಕಾರದ ಕಲ್ಲುಗಳನ್ನು ದೇವರೆಂದು ಶತಶತಮಾನಗಳಿಂದ ಪೂಜಿಸುತ್ತಾ ಬರುತ್ತಿದ್ದಾರೆ. ಆದರೆ, ಇದೀಗ ಸ್ಥಳಕ್ಕೆ ಭೇಟಿ ನೀಡಿದ ವಿಜ್ಞಾನಿಗಳು ಇವುಗಳು ಕಲ್ಲುಗಳಲ್ಲ, ಪಳೆಯುಳಿಕೆಗಳ ರೂಪದಲ್ಲಿರುವ ಡೈನೋಸಾರ್ಗಳ ಮೊಟ್ಟೆಗಳೆಂದು ಖಚಿತಪಡಿಸಿದ್ದಾರೆ. ಬೀರಬಲ್ ಸಾಹ್ನಿ ಸಂಸ್ಥೆಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಈ ಮಾಹಿತಿ ತಿಳಿದು ಬಂದಿದೆ.
ನರ್ಮದಾ ಕಣಿವೆಯ ಈ ಪ್ರದೇಶವು ಡೈನೋಸಾರ್ನೊಂದಿಗೆ ಸಂಬಂಧವನ್ನು ಹೊಂದಿದೆ. ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಇಲ್ಲಿ ಡೈನೋಸಾರ್ಗಳು ನೆಲೆಸಿದ್ದವು ಎಂಬ ಮಾತು ಇದೆ. ಇದಕ್ಕೆ ಪೂರಕ ಎಂಬುವಂತೆ ಈ ಪ್ರದೇಶಗಳಲ್ಲಿ ಲಕ್ನೋದ ಬೀರಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ (ಬಿಎಸ್‌ಐಪಿ) ನಿರ್ದೇಶಕರ ನೇತೃತ್ವದ ತಂಡವು ನಡೆಸಿದ ಇತ್ತೀಚಿನ ಸಂಶೋಧನೆಯೊಂದರಲ್ಲಿ ಪಳೆಯುಳಿಕೆಗಳ ರೂಪದಲ್ಲಿ ಮೊಟ್ಟೆಗಳಿರುವುದನ್ನು ಪತ್ತೆ ಹಚ್ಚಿದ್ದಾರೆ.
ಕಣಿವೆ ಪ್ರದೇಶದ ಗ್ರಾಮಸ್ಥರು ಕೃಷಿಕರಾಗಿದ್ದರಿಂದ ಕೃಷಿ ಚಟುವಟಿಕೆ ನಡೆಸುವಾಗ ಸಾಮಾನ್ಯವಾಗಿ ದುಂಡಗಿನ ಕಲ್ಲುಗಳು ಲಭ್ಯವಾಗುತ್ತದೆ. ಈ ಕಲ್ಲುಗಳನ್ನೇ ದೇವೆರೆಂದು ಇಲ್ಲಿನ ಗ್ರಾಮಸ್ಥರು ಶತಶತಮಾನಗಳಿಂದ ಪೂಜಿಸುತ್ತಾ ಬರುತ್ತಿದ್ದಾರೆ. ಡೈನೋಸಾರ್ ಮೊಟ್ಟೆಗಳನ್ನು ಪೂಜಿಸುತ್ತಿರುವ ಬಗ್ಗೆ ವಿಜ್ಞಾನಿಗಳು ಮಾಹಿತಿ ಕೂಡ ಪಡೆದಿದ್ದಾರೆ. ಹೀಗೆ ಮೊಟ್ಟೆಯ ಬಗ್ಗೆ ಸಂಶೋಧನೆ ನಡೆಸಿದಾಗ, ಇಲ್ಲಿಯ ಜನರು ಈ ಡೈನೋಸಾರ್‌ನ ಪಳೆಯುಳಿಕೆ ಮೊಟ್ಟೆಯನ್ನು "ಕಾಕಡ್ ಭೈರವ್" ಎಂಬ ಹೆಸರಿನಿಂದ ಶತಮಾನಗಳಿಂದ ಪೂಜಿಸಿಕೊಂಡು ಬರುತ್ತಿರುವುದನ್ನು ಅವರು ಕಂಡುಕೊಂಡಿದ್ದಾರೆ. ಪಡಲ್ಯ ಗ್ರಾಮ ಮತ್ತು ಅದರ ಸುತ್ತಲಿನ ನಾಲ್ಕೈದು ಗ್ರಾಮಗಳಲ್ಲಿ ಇದನ್ನು ಕುಲದೇವತೆಯಾಗಿ ಪೂಜಿಸಲಾಗುತ್ತದೆ. ಇದನ್ನು ಕಂಡ ತಂಡ ಇದರ ಹಿಂದಿನ ಕಥೆಯನ್ನು ಜಗತ್ತಿಗೆ ಸಾರಲು ಸಿದ್ಧತೆ ಆರಂಭಿಸಿದೆ.
ಸಿಪಿಜಿಜಿ-ಬಿಎಸ್‌ಐಪಿ ತಜ್ಞರಿಂದ ಬಹಿರಂಗ: ಬಿಎಸ್‌ಐಪಿಯ ಹಿರಿಯ ವಿಜ್ಞಾನಿ ಮತ್ತು ಇತಿಹಾಸಪೂರ್ವ ಕೇಂದ್ರದ ಹೆರಿಟೇಜ್ ಮತ್ತು ಜಿಯೋಟೂರಿಸಂ ಸಂಚಾಲಕಿ ಡಾ.ಶಿಲ್ಪಾ ಪಾಂಡೆ ಮಾತನಾಡಿ, ''ಬಿಸಿಪಿ ನಿರ್ದೇಶಕ ಪ್ರೊ.ಎಂ.ಜಿ.ಠಕ್ಕರ್ ನೇತೃತ್ವದ ತಂಡ ಧಾರ್ ಜಿಲ್ಲೆಗೆ ತೆರಳಿತ್ತು. ಇಲ್ಲಿ ತಾವು ಡೈನೋಸಾರ್ಗಳ ಪಳೆಯುಳಿಕೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಠಕ್ಕರ್ ಹೇಳಿದ್ದರು. ಇದರ ಜವಾಬ್ದಾರಿಯನ್ನು ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆ ತಮಗೆ ನೀಡಿದೆ'' ಎಂದು ಬಹಿರಂಗಪಡಿಸಿದ್ಧಾರೆ.
ಪಳೆಯುಳಿಕೆಗಳನ್ನು ಸಂರಕ್ಷಿಸುವ ಕೆಲಸ: ''ಸ್ಥಳೀಯರ ಹೇಳಿಕೆ ಪ್ರಕಾರ ಈ ಹಳ್ಳಿಯಲ್ಲಿ ಮಾತ್ರವಲ್ಲದೇ ಹತ್ತಿರದ ಹಳ್ಳಿಗಳಾದ ತಹರ್ ಹಿ ಝಾಬಾ, ಅಖಾರಾ, ಜಮ್ಯಾಪುರ ಮತ್ತು ಟಕರಿ ಗ್ರಾಮದ ಜನರು ಕೂಡ ಈ ಕಲ್ಲಿನಂತಹ ಆಕೃತಿಯನ್ನು ಪೂಜಿಸುತ್ತಾರೆ. ತಜ್ಞರ ತಂಡವು ಇಡೀ ಗ್ರಾಮವನ್ನು ಸುತ್ತಿ ಆ ಕಲ್ಲಿನ ಆಕೃತಿಗಳನ್ನು ವಿಶ್ಲೇಷಿಸಲು ಪ್ರಾರಂಭಿಸಿತು. ಕೆಲವು ಆಘಾತಕಾರಿ ಸಂಗತಿಗಳನ್ನು ಕಂಡು ಹಿಡಿದಿದೆ. ಗ್ರಾಮಸ್ಥರು ಕಲ್ಲಿನಂತಹ ಈ ವಸ್ತುವನ್ನು ತಮ್ಮ ಕುಲದೇವತೆ ಎಂದು ಕರೆಯುವ ಮೂಲಕ ಪೂಜಿಸುತ್ತಿರುವುದನ್ನು ತಂಡ ಗಮನಿಸಿದೆ. ಅವು ಡೈನೋಸಾರ್‌ನ ಟೈಟಾನೊ - ಕೊಕ್ಕರೆ ಜಾತಿಯ ಪಳೆಯುಳಿಕೆಗಳ ರೂಪದಲ್ಲಿರುವ ಮೊಟ್ಟೆಗಳಾಗಿವೆ. ಸಂಸ್ಥೆಯ ನಿರ್ದೇಶಕ ಎಂ.ಜಿ.ಠಕ್ಕರ್ ಮತ್ತು ತಂಡ ಡಿನೋ ಫಾಸಿಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಎಲ್ಲ ಪಳೆಯುಳಿಕೆಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ'' ಎಂದು ಡಾ.ಶಿಲ್ಪಾ ಪಾಂಡೆ ಹೇಳಿದರು.
20 ಹೊಸ ಮೊಟ್ಟೆಗಳು ಪತ್ತೆ: ಜಿಲ್ಲೆಯ 120 ಕಿ.ಮೀ ಪ್ರದೇಶದಲ್ಲಿ ಈ ಮೊದಲು ಸುಮಾರು 256 ಡೈನೋಸಾರ್ ಮೊಟ್ಟೆಗಳು ಕಂಡು ಬಂದಿದ್ದವು. ಜೂನ್ 2023 ರಲ್ಲಿ ನೋಂದಾಯಿಸದ ಹೆಚ್ಚುವರಿ 20 ಹೊಸ ಡೈನೋಸಾರ್ ಮೊಟ್ಟೆಗಳು ಸಹ ಕಂಡು ಬಂದಿವೆ. ಇಲ್ಲಿನ ಜನರು ಡೈನೋಸಾರ್ ಮೊಟ್ಟೆಯ ಮೇಲೆ ಮುಖದ ಆಕಾರವನ್ನು ಕೆತ್ತಿ ತಮ್ಮ ಕುಲದೈವ ಕಾಕಡ್ ಭೈರವನೆಂದು ಪೂಜಿಸುತ್ತಿರುವ ಮಾಹಿತಿ ಇದೆ. ಕಲ್ಲಿನಂತಹ ವಸ್ತುವನ್ನು ಈ ಗ್ರಾಮಸ್ಥರು ತಮ್ಮ ಹೊಲಗಳ ಗದ್ದೆಯ ಮೇಲೆ ರೇಖೆಯ ಉದ್ದಕ್ಕೂ ಇಡುತ್ತಾರೆ. ಅದು ತಮ್ಮ ಹೊಲಗಳನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇವರದ್ದು. ಇದಲ್ಲದೇ, ದೀಪಾವಳಿ ವೇಳೆ ಗರ್ಭಿಣಿ ಜಾನುವಾರುಗಳನ್ನು ಈ ಕಲ್ಲಿನಂತಹ ವಸ್ತುವಿನ ಮೇಲೆ ಹಾಯಿಸುವ ಸಂಪ್ರದಾಯ ಸಹ ಇದೆ. ಹೀಗೆ ಮಾಡುವುದರಿಂದ ಗರ್ಭಿಣಿ ಪ್ರಾಣಿ ಮತ್ತು ಹುಟ್ಟುವ ಮಗು ಎರಡೂ ಆರೋಗ್ಯವಾಗಿರುತ್ತವೆ ಅನ್ನೋದು ಇವರ ನಂಬಿಕೆ. ಸದ್ಯ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಮಧ್ಯಪ್ರದೇಶ ಸರ್ಕಾರಕ್ಕೆ ಬಿಎಸ್‌ಐಪಿ ಸಹಾಯ ಮಾಡಲಿದೆ. ಇಲ್ಲಿ ಕಂಡುಬರುವ ಎಲ್ಲ ವಸ್ತುಗಳ ದಾಖಲಾತಿ ಮತ್ತು 3ಡಿ ಮುದ್ರಣವನ್ನು ಸಿದ್ಧಪಡಿಸುವ ಕಾರ್ಯ ಕೂಡ ನಡೆಯಲಿದೆ ಎಂದು ಡಾ.ಶಿಲ್ಪಾ ತಿಳಿಸಿದ್ದಾರೆ.
ಸ್ಥಳೀಯ ವೆಸ್ತಾ ಮಂಡ್ಲೋಯ್ ಎಂಬಾತ ಮತಾನಾಡಿ, ನಾವು ಈ ದುಂಡಗಿನ ಕಲ್ಲನ್ನು ದೇವರೆಂದು ಪೂಜಿಸುತ್ತೇವೆ. ಈ ಕಲ್ಲನ್ನು ನಾವು ಹೊಲದ ಭೈರವ ಎಂದು ಪೂಜಿಸುತ್ತೇವೆ. ಈ ಸಂಪ್ರದಾಯ ನಮ್ಮ ಪೂರ್ವಜರ ಕಾಲದಿಂದ ನಡೆದುಕೊಂಡು ಬಂದಿದೆ. ಇದನ್ನು ಇಂದಿಗೂ ಇಲ್ಲಿನ ಗ್ರಾಮಸ್ಥರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಈ ದೇವರು ನಮ್ಮ ಹೊಲ ಮತ್ತು ಜಾನುವಾರುಗಳನ್ನು ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದರು. ಈ ಹಿಂದೆ ಇಲ್ಲಿನ ಪ್ರದೇಶದಲ್ಲಿ ಸುಮಾರು 256 ಮೊಟ್ಟೆಗಳು ಪತ್ತೆಯಾಗಿದ್ದವು. ಈ ಮೊಟ್ಟೆಗಳು ಸುಮಾರು 15 ಸೆಂ. ನಿಂದ 17 ಸೆಂಮೀವರೆಗೆ ಗಾತ್ರವನ್ನು ಹೊಂದಿರುತ್ತದೆ. ಈ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಇತಿಹಾಸಪೂರ್ವದ ಮಹತ್ವದ ಕುರುಹು ಪತ್ತೆ