ಜಮ್ಮು: 2019ಕ್ಕೆ ಹೋಲಿಸಿದರೆ ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ ಶೇ 87.13 ರಷ್ಟು ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿವೆ ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಲ್ಬೀರ್ ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಿಂಗ್, 2019ರಲ್ಲಿ 1,999 ಕಲ್ಲು ತೂರಾಟ ಪ್ರಕರಣಗಳು ದಾಖಲಾಗಿದ್ದವು. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಆಗಸ್ಟ್‌ನಲ್ಲಿ ರದ್ದು ಮಾಡಿದ ನಂತರ 1 ಸಾವಿರದ 193 ಪ್ರಕರಣಗಳು ದಾಖಲಾಗಿದ್ದವು. ಆದರೆ 2020ರಲ್ಲಿ ಕೇವಲ 225 ಕೇಸ್‌ಗಳು ಮಾತ್ರ ದಾಖಲಾಗಿದ್ದು, ಶೇ.87.13 ರಷ್ಟು ಪ್ರಕರಣಗಳು ಕಡಿಮೆಯಾಗಿವೆ ಎಂದು ಅಂಕಿ ಅಂಶ ನೀಡಿದ್ದಾರೆ.
2019ರ ಆಗಸ್ಟ್ 5 ರಂದು ಕೇಂದ್ರ ಸರ್ಕಾರ ಆರ್ಟಿಕಲ್-370ಯನ್ನು ರದ್ದು ಮಾಡಿತ್ತು. ಆ ಬಳಿಕ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತ್ತು.
2018ರಲ್ಲಿ 1,458, 2017 - 1,412 ಕಲ್ಲು ತುರಾಟ ಪ್ರಕರಣಗಳು ದಾಖಲಾಗಿದ್ದವು. 2020ರ ಪ್ರಕರಣಗಳನ್ನು 2016ಕ್ಕೆ ಹೋಲಿಸಿದರೆ ಶೇಕಡಾ 90 ರಷ್ಟು ಕಡಿಮೆಯಾಗಿವೆ ಎಂದು ಎಂದಿದ್ದಾರೆ.
ಓದಿ: ಎಂತಹ ಸವಾಲನ್ನೂ ಎದುರಿಸಲು ಸೇನೆ ಸದಾ ಸಿದ್ಧ: ಸಿಡಿಎಸ್ ಬಿಪಿನ್ ರಾವತ್
2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಅದೇ ವರ್ಷ 2,653 ಕಲ್ಲು ತೂರಾಟಗಳು ಕೇಸ್‌ಗಳು ದಾಖಲಾಗಿದ್ದವು. ಕಾಶ್ಮೀರದಾದ್ಯಂತ ಹಿಂಸಾಚಾರ, ಪ್ರತಿಭಟನೆಗಳು ನಡೆದಿದ್ದವು. 2015ರಲ್ಲಿ ಕೇವಲ 730 ಕೇಸ್‌ಗಳು ದಾಖಲಾಗಿದ್ದು, 2010, 2016 ಹಾಗೂ 2019ರಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಸದ್ಯ ಜಮ್ಮು-ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, 2021ರಲ್ಲೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ದಲ್ಬೀರ್ ಸಿಂಗ್ ತಿಳಿಸಿದ್ದಾರೆ.