ಅಯೋಧ್ಯೆ: ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಿ ಇಡಲಾಗಿದ್ದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸೀತಾ ಮಂದಿರದಿಂದ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ವಿಶೇಷ ಕಲ್ಲನ್ನು ನೀಡಲಾಗಿದೆ. ಶ್ರೀಲಂಕಾದ ಸೀತಾ ಎಲಿಯಾದ ಕಲ್ಲನ್ನು ಅಯೋಧ್ಯೆಯ ರಾಮ ದೇವಾಲಯದ ನಿರ್ಮಾಣದಲ್ಲಿ ಬಳಸಲಾಗುವುದು.
ಈ ಕುರಿತು ಟ್ವೀಟ್ ಮಾಡಿರುವ ಕೊಲಂಬೊದಲ್ಲಿರುವ ಭಾರತದ ವಿದೇಶಾಂಗ ಇಲಾಖೆಯ ಕಚೇರಿ, ರಾಮಮಂದಿರ ನಿರ್ಮಾಣಕ್ಕೆ ಶ್ರೀಲಂಕಾದ ಸೀತಾ ಎಲಿಯಾದಿಂದ ಕಲ್ಲನ್ನು ನೀಡಲಾಗುತ್ತಿದ್ದು, ಇದು ಭಾರತ ಮತ್ತು ಶ್ರೀಲಂಕಾ ದ್ವೀಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸಲಿದೆ. ಈ ಕಲ್ಲನ್ನು ಮಯೂರಪತಿ ಅಮ್ಮನ್ ದೇವಸ್ಥಾನದಲ್ಲಿ ಶ್ರೀಲಂಕಾದ ಹೈ ಕಮಿಷನರ್ ಸ್ವೀಕರಿಸಿದರು. ನಂತರ ಇದನ್ನು ಶ್ರೀಲಂಕಾದ ಹೈ ಕಮಿಷನರ್ ಭಾರತದ ಹೈ ಕಮಿಷನರ್ ಮಿಲಿಂಡಾ ಮೊರಗೋಡ ಅವರಿಗೆ ಹಸ್ತಾಂತರಿಸಿದರು ಎಂದು ತಿಳಿಸಿದೆ.
ಇದನ್ನೂ ಓದಿ: ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಯುಎಸ್ ರಕ್ಷಣಾ ಕಾರ್ಯದರ್ಶಿ ಆಸ್ಟಿನ್
ರಾವಣ ಸೀತಾದೇವಿಯನ್ನು ಅಪಹರಣ ಮಾಡಿ ಶ್ರೀಲಂಕಾದ ಎಲಿಯಾ ಗ್ರಾಮದಲ್ಲಿ ಸೆರೆಯಲ್ಲಿಟ್ಟಿದ್ದ ಎಂದು ಸ್ಥಳೀಯ ಜನರ ನಂಬಿಕೆಯಾಗಿದೆ. ಇದೇ ಸ್ಥಳದಲ್ಲಿಯೇ ಸೀತಾ ದೇವಾಲಯವಿದೆ. ಕಳೆದ ಆಗಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂದಿರ ನಿರ್ಮಾಣದ ಉಸ್ತುವಾರಿಯನ್ನು ವಹಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.