ಚೆನ್ನೈ: ಅಗ್ನಿಪಥ್ ನೇಮಕಾತಿ ಯೋಜನೆ ವಿರೋಧಿಸಿ ನೂರಾರು ಸೇನಾ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಈ ಪ್ರಸ್ತಾಪದ ವಿರುದ್ಧ ಕಳವಳ ವ್ಯಕ್ತಪಡಿಸಿದರೆ, ರಾಜ್ಯಪಾಲ ಆರ್ ಎನ್ ರವಿ ಅವರು ಬೆಂಬಲ ಸೂಚಿಸಿದ್ದಾರೆ.
ಈ ಪ್ರಸ್ತಾಪವು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸ್ಟಾಲಿನ್ ಆರೋಪಿಸಿದ್ದು, ಕೇಂದ್ರದಿಂದ ಮರು ಚಿಂತನೆಗೆ ಆಗ್ರಹ ಮಾಡಿದ್ದಾರೆ. ಆದರೆ ಯುವಕರು ಪ್ರತಿಕೂಲ ಅಂಶಗಳಿಂದ ದಾರಿತಪ್ಪಿಸಬಾರದು ಎಂದು ರವಿ ಈ ವೇಳೆ ಹೇಳಿದ್ದಾರೆ.
ಅಗ್ನಿಪಥ್ ವಿರುದ್ಧ ಯುವಕರಿಂದ ವ್ಯಾಪಕ ಪ್ರತಿಭಟನೆಗಳು ನಡೆದಿವೆ, ದೇಶದ ಬಗ್ಗೆ ಕಾಳಜಿ ಹೊಂದಿರುವ ಅನೇಕ ಮಾಜಿ ಸೇನಾ ಅಧಿಕಾರಿಗಳು ಅದನ್ನು ವಿರೋಧಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ರಾಜಕೀಯ ಪಕ್ಷಗಳ ಹೊರತಾಗಿ, ಹಲವು ವರ್ಷಗಳಿಂದ ರಾಷ್ಟ್ರೀಯ ಭದ್ರತೆಯಲ್ಲಿ ಸೇವೆ ಸಲ್ಲಿಸಿದ ಸೇನಾ ಅಧಿಕಾರಿಗಳು ಆರ್ಮಿ ಕೆಲಸ ಅರೆಕಾಲಿಕ ಕೆಲಸವಲ್ಲ ಮತ್ತು ಇದು ಪಡೆಯ ಶಿಸ್ತಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಯೋಜನೆ ಅಪಾಯಕಾರಿ ಎಂದು ಹೇಳಿದ್ದಾರೆ ಎಂದು ಈ ವೇಳೆ ಉಲ್ಲೇಖಿಸಿದರು.
ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಮತ್ತು ಯುವಕರ ಸೇನಾ ಉದ್ಯೋಗದ ಮಹತ್ವಾಕಾಂಕ್ಷೆಯ ಮೇಲೆ ಪರಿಣಾಮ ಬೀರುವ ಅಗ್ನಿಪಥವನ್ನು ಹಿಂತೆಗೆದುಕೊಳ್ಳುವಂತೆ ನಾನು ಕೇಂದ್ರ ಸರ್ಕಾರವನ್ನು ವಿನಂತಿಸುತ್ತೇನೆ. ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮರುಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.
ಟುಟಿಕೋರಿನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲ ರವಿ ಅವರು ಮಾತನಾಡಿ, ಯುವಕರು ಸಶಸ್ತ್ರ ಪಡೆಗಳನ್ನು ಸೇರಲು ಅನುವು ಮಾಡಿಕೊಡುವ ಕ್ರಾಂತಿಕಾರಿ ಮತ್ತು ಪರಿವರ್ತಕ ನೀತಿಯಾದ ಅಗ್ನಿಪಥ್ ಯೋಜನೆಯು ನಮ್ಮ ಯುವಕರಿಗೆ ಉತ್ತಮ ವೇದಿಕೆಯಾಗಿದೆ. ಯುವಕರು ಕೆಲವು ಪ್ರತಿಕೂಲ ಅಂಶಗಳಿಂದ ದಾರಿ ತಪ್ಪಬಾರದು. ಚಿಕ್ಕ ವಯಸ್ಸಿನಲ್ಲಿ ಅವರು ಅಗ್ನಿವೀರರಾಗಿ ಆತ್ಮ ವಿಶ್ವಾಸ, ಶಿಸ್ತು, ಸೂಕ್ತ ತರಬೇತಿ, ಆರ್ಥಿಕವಾಗಿ ಸದೃಢರಾಗಿ ಕೌಶಲ್ಯ ಮತ್ತು ಜ್ಞಾನದಿಂದ ದೇಶ ಸೇವೆ ಮಾಡಿ ಜೀವನದಲ್ಲಿ ಉನ್ನತಿ ಸಾಧಿಸಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಕುಡಿಯುವ ನೀರಿನ ಸಮಸ್ಯೆ.. ಜನರಿಗೆ ತಪ್ಪುತ್ತಿಲ್ಲ ಪರದಾಟ