ಶ್ರೀ ಗಂಗಾನಗರ (ರಾಜಸ್ಥಾನ) : ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಇಂದು ಮಿಜೋರಾಂ ಮತ್ತು ಛತ್ತೀಸ್ಗಡದಲ್ಲಿ ಚುನಾವಣೆ ನಡೆಯುತ್ತಿದೆ. ರಾಜಸ್ಥಾನದಲ್ಲೂ ಚುನಾವಣಾ ಕಣ ರಂಗೇರಿದೆ. ಸೋಮವಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿತ್ತು. ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ಜರುಗಲಿದೆ.
ಪ್ರತಿ ಬಾರಿ ಚುನಾವಣೆ ನಡೆದಾಗಲೂ ಹಲವು ಅಭ್ಯರ್ಥಿಗಳು ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಾಗಿ ನಾಮಪತ್ರ ಸಲ್ಲಿಸುತ್ತಾರೆ. ಒಂದೆರಡು ಬಾರಿ ಕೆಲ ಕಚ್ಚಿದರೆ, ಈ ಚುನಾವಣೆ ಮತ್ತು ರಾಜಕಾರಣದ ಸಹವಾಸವೇ ಬೇಡ ಅಂತಾ ಹಿಂದೆ ಸರಿಯುತ್ತಾರೆ. ಆದ್ರೆ ರಾಜಸ್ಥಾನದ ಶ್ರೀಕರಣಪುರ ವಿಧಾನಸಭಾ ಕ್ಷೇತ್ರದ ವ್ಯಕ್ತಿಯೊಬ್ಬರು ಬರೋಬ್ಬರಿ 32 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇದೀಗ 33ನೇ ಬಾರಿಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
32 ಬಾರಿ ಸೋತರೂ 33 ನೇ ಬಾರಿ ಸ್ಪರ್ಧೆ : ಶ್ರೀಕರಣಪುರ ವಿಧಾನಸಭಾ ಕ್ಷೇತ್ರದ 25 ಎಫ್ ಗ್ರಾಮದ ನಿವಾಸಿಯಾಗಿರುವ 78 ವರ್ಷದ ತೀತರ್ ಸಿಂಗ್ ಅವರು ಇದೀಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆ. ತೀತರ್ ಸಿಂಗ್ ಅವರು ಮೂವರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿ ಐವರು ಮಕ್ಕಳನ್ನು ಹೊಂದಿದ್ದಾರೆ. ಎಲ್ಲರಿಗೂ ಮದುವೆಯಾಗಿದೆ. ಜೊತೆಗೆ ಕೆಲ ಮೊಮ್ಮಕ್ಕಳಿಗೂ ಮದುವೆಯಾಗಿದೆ. 1970ರಿಂದ ತೀತರ್ ಸಿಂಗ್ ಅವರು ಶ್ರೀಕರಣಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾ ಬಂದಿದ್ದಾರೆ. ದಲಿತ ಸಮುದಾಯದವರಾದ ತೀತರ್ ಸಿಂಗ್ ಒಟ್ಟು 32 ಬಾರಿ ವಿವಿಧ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಈ ಚುನಾವಣೆಗಳಲ್ಲಿ ಹಲವು ಬಾರಿ ಸೋತರೂ ಎದೆಗುಂದದೇ ಮತ್ತೆ ಚುನಾವಣೆಗೆ ನಿಲ್ಲುತ್ತಾರೆ.
ತೀತರ್ ಸಿಂಗ್ ಅವರು ತಾವು ಸ್ಪರ್ಧಿಸಿರುವ ಚುನಾವಣೆಗಳಲ್ಲಿ ಸುಮಾರು 20ಕ್ಕೂ ಅಧಿಕ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಇದುವರೆಗೆ ತೀತರ್ ಅವರು 10 ವಿಧಾನಸಭೆ ಚುನಾವಣೆ, 10 ಲೋಕಸಭೆ ಚುನಾವಣೆ, ತಲಾ 4 ಬಾರಿ ಜಿಲ್ಲಾ ಪಂಚಾಯತ್, ಸರಪಂಚ್, ವಾರ್ಡ್ ಚುನಾವಣೆಗಳಲ್ಲೂ ಸ್ಪರ್ಧೆ ಮಾಡಿದ್ದಾರೆ.
ಮನರೇಗಾದಲ್ಲಿ ದಿನಗೂಲಿ ಕಾರ್ಮಿಕರಾಗಿರುವ ಸಿಂಗ್ : ತೀತರ್ ಸಿಂಗ್ ಅವರು ಮನರೇಗಾದಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಯಾಕೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ, ನಾನು ನನ್ನ ಹಕ್ಕನ್ನು ಪಡೆಯಲು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಹಲವು ಬಾರಿ ಸೋತರೂ ಸ್ಪರ್ಧೆ ಮಾಡುತ್ತೇನೆ. ಸರ್ಕಾರವು ಬಡ ಕಾರ್ಮಿಕರಿಗೆ, ಜಮೀನು ಇಲ್ಲದವರಿಗೆ ಭೂಮಿಯನ್ನು ನೀಡಬೇಕು. ಜೊತೆಗೆ ವಿವಿಧ ಸೌಲಭ್ಯಗಳನ್ನು ನೀಡಬೇಕು. ನಾನು ನನ್ನ ಹಕ್ಕುಗಳನ್ನು ಪಡೆಯಲು ಸ್ಪರ್ಧೆ ಮಾಡುತ್ತೇನೆ. ಚುನಾವಣೆ ನನಗೆ ಅಸ್ತ್ರ ಎಂದು ಹೇಳುತ್ತಾರೆ.
ಸಾಕಷ್ಟು ಕೂಲಿ ಕಾರ್ಮಿಕರು ಭೂಮಿ ಹೊಂದಿಲ್ಲ. ಅವರಿಗೆ ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಾನು ಹೋರಾಟ ನಡೆಸುತ್ತಿದ್ದೇನೆ. ನನ್ನ ಮಗನೂ ಕೂಲಿ ಕೆಲಸ ಮಾಡುತ್ತಿದ್ದಾನೆ. ನಾವೆಲ್ಲ ದಿನಗೂಲಿ ಕಾರ್ಮಿಕರು. ಕಾರ್ಮಿಕರಿಗೆ ಭೂಮಿಯನ್ನು ನೀಡುವಂತೆ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ. ಭೂ ವಿತರಣೆ ಮಾಡುವ ಸಂಬಂಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಾ ಬಂದಿದ್ದೇನೆ ಎಂದು ಹೇಳುತ್ತಾರೆ.
ನನ್ನ ಬಳಿ ಕೇವಲ 2500 ರೂ. ನಗದು ಇದೆ. ಅದು ಬಿಟ್ಟರೆ ಜಮೀನು, ಆಸ್ತಿ, ವಾಹನಗಳು ಏನೂ ಇಲ್ಲ. ನಾನು ಮನರೇಗಾದಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ಜಮೀನುಗಳಿಲ್ಲದ ದಿನಗೂಲಿ ನೌಕರರಿಗೆ ಭೂಮಿಯನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಸಿಂಗ್ ಅವರು 2008ರ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕೇವಲ 938 ಮತಗಳನ್ನು ಪಡೆದಿದ್ದರು. 2013ರಲ್ಲಿ 427 ಮತಗಳನ್ನು ಮತ್ತು 2018ರ ಚುನಾವಣೆಯಲ್ಲಿ 653 ಮತಗಳನ್ನು ಪಡೆದಿದ್ದರು. ತೀತರ್ ಸಿಂಗ್ ಇದುವರೆಗೆ ಸ್ಪರ್ಧಿಸಿರುವ ಎಲ್ಲಾ ಚುನಾವಣೆಯಲ್ಲಿ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಪ್ರತಿ ಬಾರಿ ಠೇವಣಿ ಕಳೆದುಕೊಂಡರೂ ಮತ್ತೆ ಚುನಾವಣೆ ಸ್ಪರ್ಧೆ ಮಾಡುತ್ತಾ ಬಂದಿದ್ದಾರೆ.
ಇದನ್ನೂ ಓದಿ : ಛತ್ತೀಸ್ಗಢ ಚುನಾವಣೆ: ಮೊದಲ ಹಂತದ ಮತದಾನಕ್ಕೆ ಮುನ್ನ ಬಾಂಬ್ ಸ್ಫೋಟ: ಇಬ್ಬರು ಚುನಾವಣಾಧಿಕಾರಿಗಳು, ಯೋಧನಿಗೆ ಗಾಯ