ತಮಿಳುನಾಡು : ರಾಜ್ಯದ ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ನಕಲಿ ವಿಷಪೂರಿತ ಮದ್ಯ ಸೇವಿಸಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 12 ಜನ ಸಾವನ್ನಪ್ಪಿದ್ದಾರೆ. 30 ಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ವಿಲ್ಲುಪುರಂ ಜಿಲ್ಲೆಯ ಮರಕ್ಕನಂ ಬಳಿಯ ಎಕ್ಕಿಯಾರ್ಕುಪ್ಪಂನ ಆರು ಮಂದಿ ಭಾನುವಾರ ಮೃತಪಟ್ಟಿದ್ದಾರೆ. ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಗಮ್‌ನಲ್ಲಿ ಶುಕ್ರವಾರ ಇಬ್ಬರು ಮತ್ತು ಭಾನುವಾರ ದಂಪತಿ ಸಾವನ್ನಪ್ಪಿದ್ದಾರೆ. ಎಲ್ಲರೂ ಅಕ್ರಮ ಮದ್ಯ ಸೇವನೆಯಿಂದಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸ್ ಮಹಾನಿರ್ದೇಶಕ ಎನ್.ಕಣ್ಣನ್ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ವಿಲ್ಲುಪುರಂನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಐಜಿ ಎನ್.ಕಣ್ಣನ್, "ತಮಿಳುನಾಡಿನ ಉತ್ತರ ವಲಯದಲ್ಲಿ ನಕಲಿ ಮದ್ಯ ಸೇವನೆಯ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಒಂದು ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಮತ್ತೊಂದು ವಿಲ್ಲುಪುರಂ ಜಿಲ್ಲೆಯಲ್ಲಿ. ಮರಕ್ಕನಂ ಬಳಿಯ ವಿಲ್ಲುಪುರಂ ಜಿಲ್ಲೆಯ ಎಕ್ಕಿಯಾರ್ಕುಪ್ಪಂ ಗ್ರಾಮದಲ್ಲಿ ನಿನ್ನೆ 6 ಮಂದಿಗೆ ವಾಂತಿ, ಕಣ್ಣು ಉರಿ, ತಲೆತಿರುಗುವಿಕೆ ಕಂಡುಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಾಲ್ವರು ಮೃತಪಟ್ಟಿದ್ದು, ಇಬ್ಬರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದ್ರೆ, ಅವರಿಬ್ಬರೂ ಸಹ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಒಟ್ಟು 33 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರ ತಂಡ ಗ್ರಾಮಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಅಮರನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ಬಳಿಯಿದ್ದ ನಕಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಮದ್ಯದಲ್ಲಿ ಮೆಥೆನಾಲ್ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ವ್ಯಾಪಾರದಲ್ಲಿ ನಷ್ಟವಾಗಿದ್ದಕ್ಕೆ ಬಡ ಯುವತಿಯರ ಕರೆ ತಂದು ನಗ್ನ ಪೂಜೆ, ಲೈಂಗಿಕ ದೌರ್ಜನ್ಯ!
ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆಯನ್ನು ವಿವರಿಸಿದ ಐಜಿ, "ಬೆಳಗ್ಗೆ, ಚೆಂಗಲ್ಪಟ್ಟು ಜಿಲ್ಲೆಯ ಚಿತ್ತಮೂರಿನಲ್ಲಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ನಾವು ಭಾವಿಸಿದ್ದೆವು. ಆದರೆ, ರೋಗಲಕ್ಷಣವನ್ನು ನೋಡಿದಾಗ ನಕಲಿ ಮದ್ಯ ಸೇವನೆ ಎಂಬ ಅಂಶ ತಿಳಿಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಶವಪರೀಕ್ಷೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಮ್ಮಾವಸಾಯಿ ಎಂಬ ಓರ್ವ ಆರೋಪಿಯನ್ನು ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಕೇರಳದಲ್ಲಿ 12,000 ಕೋಟಿ ರೂ ಮೌಲ್ಯದ ಮಾದಕ ವಸ್ತು ಜಪ್ತಿ! ಪಾಕ್ ಪ್ರಜೆ ಎನ್‌ಸಿಬಿ ವಶಕ್ಕೆ
ಅಧಿಕಾರಿಗಳ ಅಮಾನತು: ಕೇಸ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ವಿಲ್ಲುಪುರಂ ಮರಕ್ಕನಂನಲ್ಲಿ ಇಬ್ಬರು ಇನ್ಸ್‌ಪೆಕ್ಟರ್‌ಗಳು ಮತ್ತು ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ. ಅಂತೆಯೇ, ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಓರ್ವ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ.