ನವದೆಹಲಿ: ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಅಧಿವೇಶನದಲ್ಲಿ 5 ಕಲಾಪಗಳು ನಡೆಯಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಪೋಸ್ಟ್ ಮಾಡಿದ್ದಾರೆ. "ಅಮೃತ್ ಕಾಲ್ ನಡುವೆ, ಸಂಸತ್ತಿನಲ್ಲಿ ಫಲಪ್ರದ ಚರ್ಚೆಯನ್ನು ನಡೆಸಲು ಎದುರು ನೋಡುತ್ತಿದ್ದೇನೆ" ಎಂದು ಜೋಶಿ ಪೋಸ್ಟ್ ಮಾಡಿದ್ದಾರೆ.
ಸಂಭಾವ್ಯ ಕಾರ್ಯಸೂಚಿಗಳ ಬಗ್ಗೆ ಸರ್ಕಾರ ಈವರೆಗೂ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಅಲ್ಲದೆ ಈ ವಿಶೇಷ ಅಧಿವೇಶನವು ಹೊಸ ಸಂಸತ್ ಕಟ್ಟಡದಲ್ಲಿ ನಡೆಯುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅಧಿವೇಶನ ಹಳೆಯ ಕಟ್ಟಡದಲ್ಲಿಯೇ ನಡೆಯಬಹುದು ಎಂದು ಮೂಲಗಳು ಹೇಳಿವೆ. ಅಲ್ಲದೆ, ಇದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನ ಆಗಿರುವ ಸಾಧ್ಯತೆಗಳೂ ಇಲ್ಲ. ಅಧಿವೇಶನದಲ್ಲಿ ಯಾವುದಾದರೂ ಮುಖ್ಯವಾದ ಮಸೂದೆ ಪಾಸ್ ಮಾಡಲಾಗುವುದೇ ಎಂಬ ಬಗ್ಗೆಯೂ ಮಾಹಿತಿ ಇಲ್ಲ.
ವಿಶೇಷ ಅಧಿವೇಶನ ನಡೆಸುವ ನಿರ್ಣಯ ಪ್ರಕಟಿಸಿದ ಸಮಯ ಮಾತ್ರ ಸಾಕಷ್ಟು ಕುತೂಹಲಕರವಾಗಿದೆ. ಮುಂಬೈನಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಮಾಡಿಕೊಂಡ ಐಎನ್ಡಿಎಐ ಬಣದ ಸಭೆ ನಡೆಯುತ್ತಿರುವಾಗಲೇ ವಿಶೇಷ ಅಧಿವೇಶನದ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ಪುನಃ ಸ್ಥಾಪಿಸುವ ಬಗ್ಗೆ ಇಂದು ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಹೇಳಿಕೆ ನೀಡಿತ್ತು.
ಈ ಹಿಂದೆ ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 20 ಮತ್ತು ಆಗಸ್ಟ್ 11 ರ ನಡುವೆ ನಡೆದಿತ್ತು. ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರದ ವಿಷಯದ ಬಗ್ಗೆ ಬಿಜೆಪಿ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮತ್ತು ಪ್ರತಿಪಕ್ಷ ಐಎನ್ಡಿಎಐ (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್) ಬಣದ ನಡುವೆ ತೀವ್ರ ವಾಗ್ವಾದ ನಡೆದಿತ್ತು.
ಐ.ಎನ್.ಡಿ.ಐ.ಎ. ಬಣ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿತ್ತು. ಆದರೆ ಕೊನೆಯ ದಿನದಂದು ಈ ಗೊತ್ತುವಳಿಗೆ ಸೋಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಸಮಯದಲ್ಲಿ ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿ ಲೋಕಸಭೆಯಿಂದ ಹೊರನಡೆದಿದ್ದವು.
ಸೆಪ್ಟೆಂಬರ್ 18 ರಿಂದ 22 ರವರೆಗೆ ಸರ್ಕಾರ ಕರೆದಿರುವ ಐದು ದಿನಗಳ ಸಂಸತ್ತಿನ ವಿಶೇಷ ಅಧಿವೇಶನದ ಸಮಯವನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ. ಈ ಬಗ್ಗೆ ಮಾತನಾಡಿದ ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, ಗಣೇಶ ಚತುರ್ಥಿಯ ಮಧ್ಯೆ ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವ ಸರ್ಕಾರದ ನಿರ್ಧಾರ ಆಶ್ಚರ್ಯ ತಂದಿದೆ ಎಂದು ಹೇಳಿದರು. ಸಂಸತ್ತಿನ ವಿಶೇಷ ಅಧಿವೇಶನದ ದಿನಾಂಕಗಳನ್ನು ಮರುಪರಿಶೀಲಿಸುವಂತೆ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕೋರಿದ್ದಾರೆ.
ಇದನ್ನೂ ಓದಿ : ಜೈಲು ಕೈದಿಗಳ ಅಸ್ವಾಭಾವಿಕ ಸಾವಿಗೆ ಆತ್ಮಹತ್ಯೆಯೇ ಪ್ರಮುಖ ಕಾರಣ: ಕಾರಾಗೃಹ ಸುಧಾರಣಾ ಸಮಿತಿ ವರದಿ