ಜುನಾಗಢ: ಜುನಾಗಢ ಕೃಷಿ ವಿಶ್ವವಿದ್ಯಾನಿಲಯದ ಪಶು ಸಂಗೋಪನಾ ಕೇಂದ್ರದಲ್ಲಿ ಹಾಲು ಕರೆಯುವ ಪ್ರಾಣಿಗಳಿಗೆ ಆಗುವ ದೈಹಿಕ ಗಾಯಗಳನ್ನು ಗಮನದಲ್ಲಿಟ್ಟುಕೊಂಡು ಹಸು ಮತ್ತು ಎಮ್ಮೆಗಳ ಕೊಟ್ಟಿಗೆಯಲ್ಲಿ ವಿಶೇಷವಾದ ಯಂತ್ರವೊಂದನ್ನು ಅಳವಡಿಸಲಾಗಿದೆ. ಈ ಯಂತ್ರವು ಹಾಲು ಕರೆಯುವ ದನ ಮತ್ತು ಎಮ್ಮೆಗಳಿಗೆ ಉಂಟಾಗುವ ನೈಸರ್ಗಿಕ ತುರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಯಂತ್ರದ ವಿಶೇಷತೆ ಏನೆಂದರೆ, ಪ್ರಾಣಿಗಳಿಗೆ ಯಾವುದೇ ರೀತಿಯ ಗಾಯ ಅಥವಾ ಹಾನಿಯಾಗುವುದಿಲ್ಲ.
ಬೆಲೆ ಎಷ್ಟು?: ಜುನಾಗಢ್ ಕೃಷಿ ವಿಶ್ವವಿದ್ಯಾಲಯದ ಪಶುಸಂಗೋಪನಾ ಕೇಂದ್ರವು ಐರೋಪ್ಯ ದೇಶಗಳಿಂದ ಈ ಗ್ರೂಮಿಂಗ್ ಯಂತ್ರಗಳನ್ನು ಖರೀದಿಸಿದೆ. ಈ ಯಂತ್ರವನ್ನು ಸ್ವೀಡನ್ ಮತ್ತು ಜರ್ಮನಿ ಮತ್ತು ಇತರ ದೇಶಗಳಲ್ಲಿ ಪಶುಸಂಗೋಪನೆ ಉದ್ಯಮದಲ್ಲಿ ತೊಡಗಿರುವ ರೈತರು ವ್ಯಾಪಕವಾಗಿ ಬಳಸುತ್ತಾರೆ. ಇದೇ ಮೊದಲ ಬಾರಿಗೆ ಕೃಷಿ ನರ್ಸರಿಯಲ್ಲಿ ಯಂತ್ರ ಅಳವಡಿಸಲಾಗಿದೆ. ಇದರ ಮಾರುಕಟ್ಟೆ ಬೆಲೆ ಸುಮಾರು ಎರಡು ಲಕ್ಷ ರೂಪಾಯಿ. ಈ ಯಂತ್ರವು ವಿದ್ಯುಚ್ಛಕ್ತಿಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಇದರ ದೊಡ್ಡ ಪ್ರಯೋಜನವೆಂದರೆ ಪ್ರಾಣಿಗಳಿಗೆ ವಿದ್ಯುತ್ ಆಘಾತದ ಸಾಧ್ಯತೆಯಿಲ್ಲ.
ಹೇಗೆ ಕೆಲಸ ಮಾಡುತ್ತದೆ?: ಎಲೆಕ್ಟ್ರಿಕ್ ಗ್ರೂಮಿಂಗ್ ಯಂತ್ರಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ನೈಸರ್ಗಿಕ ತುರಿಕೆಯ ಸಮಯದಲ್ಲಿ ಹಸು ಅಥವಾ ಎಮ್ಮೆ ಹಾಲುಕರೆಯುವ ಯಂತ್ರವನ್ನು ಸ್ಪರ್ಶಿಸಿದಾಗ, ಯಂತ್ರವು ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ. ಈ ಯಂತ್ರವು ಪ್ರಾಣಿಗಳ ತುರಿಕೆಗೆ ಚರ್ಮವನ್ನು ಮುಟ್ಟಿದ ತಕ್ಷಣ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಪ್ರಾಣಿಗಳ ಮೈ ಯಂತ್ರದಿಂದ ದೂರವಾದಾಗ ಯಂತ್ರವು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.
ಹಸು-ಎಮ್ಮೆಗಳಂತಹ ಹಾಲು ಕರೆಯುವ ಪ್ರಾಣಿಗಳನ್ನು ಸಾಕುವುದರ ಮೂಲಕ ಸ್ವಯಂ ಉದ್ಯೋಗ ಮಾಡಿಕೊಂಡಿರುವ ಗುಜರಾತ್‌ನ ಹೈನುಗಾರರಿಗೆ ಈ ಯಂತ್ರವು ವರದಾನವಾಗಿದೆ. ತುರಿಕೆಯಾದಾಗ ದನಗಳು ಗೋಡೆ ಅಥವಾ ಇತರ ಇತರ ಪ್ರದೇಶಗಳಿಗೆ ಮೈ ಕೆರೆದುಕೊಳ್ಳುವ ಮೂಲಕ ಗಾಯ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ. ಈಗ ಅಳವಡಿಸಲಾಗಿರುವ ಗ್ರೂಮಿಂಗ್ ಯಂತ್ರದಿಂದ ದನಗಳು ಹೀಗೆ ಗಾಯ ಮಾಡಿಕೊಳ್ಳುವುದನ್ನು ತಪ್ಪಿಸಬಹುದು.
ಬಜೆಟ್ನಲ್ಲಿ ಉತ್ತೇಜನ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023 ರಂದು ಘೋಷಿಸಿದ ಕೇಂದ್ರ ಬಜೆಟ್ 2023-24 ರಲ್ಲಿ ಪಶುಸಂಗೋಪನಾ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗಿದೆ. ಹಣಕಾಸು ವರ್ಷ 2022-23 ಕ್ಕೆ ಹೋಲಿಸಿದರೆ ಈ ಬಾರಿಯ ಪರಿಷ್ಕೃತ ಹಂಚಿಕೆಗಳು ಸುಮಾರು ಶೇ 40 ರಷ್ಟು ಹೆಚ್ಚಾಗಿದೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು 4,327.85 ಕೋಟಿ ರೂ.ಗಳ ಹಂಚಿಕೆಯನ್ನು ಪಡೆದುಕೊಂಡಿದ್ದು, 2022-23ರ ಪರಿಷ್ಕೃತ ಬಜೆಟ್ನಲ್ಲಿ ಇದು 3,105.17 ಕೋಟಿ ರೂ. ಆಗಿತ್ತು.
ಒಟ್ಟು ವಿನಿಯೋಗದ ಗಮನಾರ್ಹ ಭಾಗ ರೂ 2,349.71 ಕೋಟಿ ರೂಪಾಯಿಗಳನ್ನು ಜಾನುವಾರುಗಳ ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಮೀಸಲಿಡಲಾಗಿದೆ. ದೇಶವು ಕಳೆದ ಮೂರು ವರ್ಷಗಳಿಂದ ಲಂಪಿ ಸ್ಕಿನ್ ಡಿಸೀಸ್ ಮತ್ತು ಆಫ್ರಿಕನ್ ಹಂದಿ ಜ್ವರ ಈ ಎರಡು ಮಾರಣಾಂತಿಕ ಜಾನುವಾರು ರೋಗಗಳ ಪರಿಣಾಮದಿಂದ ತತ್ತರಿಸುತ್ತಿರುವುದು ಗಮನಾರ್ಹ. ಜಾನುವಾರು ವಲಯದ ಸುಸ್ಥಿರ ಅಭಿವೃದ್ಧಿಗಾಗಿ ರಾಷ್ಟ್ರೀಯ ಜಾನುವಾರು ಮಿಷನ್ ಆರಂಭಿಸಲಾಗಿದೆ. ವಿಶೇಷವಾಗಿ ಜಾನುವಾರುಗಳು, ಮೆಲುಕು ಹಾಕುವ ಪ್ರಾಣಿಗಳು ಮತ್ತು ಇತರ ಸಣ್ಣ ಜಾನುವಾರುಗಳನ್ನು ಹೊಂದಿರುವ ಈ ವಲಯಕ್ಕೆ 410 ಕೋಟಿ ರೂ. ಮೀಸಲಿಡಲಾಗಿದೆ.
ಇದನ್ನೂ ಓದಿ: ಕಾರವಾರದಲ್ಲಿ ಬಿಡಾಡಿ ದನಗಳ ಕಾಟ: ಕತ್ತಲಲ್ಲಿ ಹೆಚ್ಚುತ್ತಿವೆ ಅಪಘಾತಗಳು