ಲಖನೌ(ಉತ್ತರ ಪ್ರದೇಶ): ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ, ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ರಾಂಪುರ್ನ ಶಾಸಕ ಮೊಹಮ್ಮದ್ ಅಜಂ ಖಾನ್ ತಮ್ಮ ಮಗ ಹಾಗೂ ಶಾಸಕ ಅಬ್ದುಲ್ಲಾ ಅಜಂ ಖಾನ್ ಜೊತೆ ಉತ್ತರ ಪ್ರದೇಶ ವಿಧಾನಸಭೆಯ ಶಾಸಕರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನಾ ಅವರು ತಮ್ಮ ಚೇಂಬರ್ನಲ್ಲಿ ಪ್ರಮಾಣವಚನ ಬೋಧಿಸಿದರು. ಸ್ಪೀಕರ್ ಅವರು ಅಜಂ ಖಾನ್ ಅವರಿಗೆ ಸಂವಿಧಾನ ಮತ್ತು ವಿಧಾನಸಭೆ ನಿಯಮಗಳ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.
ವಿವಿಧ ಕ್ರಿಮಿನಲ್ ಆರೋಪಗಳ ಮೇಲೆ ಜೈಲಿನಲ್ಲಿದ್ದಾಗ ಇತ್ತೀಚಿನ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿದ್ದ ಅಜಂ ಖಾನ್, 27 ತಿಂಗಳು ಜೈಲಿನಲ್ಲಿ ಕಳೆದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರ ಪುತ್ರ ಅಬ್ದುಲ್ಲಾ ಅಜಂ ರಾಂಪುರದ ಸುವಾರ್ ಕ್ಷೇತ್ರದಿಂದ ಗೆದ್ದಿದ್ದರು. ಹಿರಿಯ ನಾಯಕ ಅಜಂ ಖಾನ್ ತಮ್ಮ ಹಿತೈಷಿಗಳ ಸಲಹೆಯ ಮೇರೆಗೆ ಪ್ರಮಾಣ ವಚನಕ್ಕೆ ಬರಲು ನಿರ್ಧರಿಸಿದ್ದರು ಎಂದು ಅಜಂ ಖಾನ್ ಅವರ ಆಪ್ತ ಮೂಲಗಳು ತಿಳಿಸಿವೆ.
ಅವರು ಸೋಮವಾರ ಮುಂಜಾನೆ ರಾಮ್‌ಪುರದಿಂದ ಪ್ರಮಾಣವಚನ ಸ್ವೀಕಾರಕ್ಕಾಗಿ ಲಖನೌಗೆ ಬಂದಿದ್ದರು. ಅನಾರೋಗ್ಯದ ಕಾರಣದಿಂದ ದೂರ ಉಳಿಯಲು ಅವರು ಮೊದಲೇ ನಿರ್ಧರಿಸಿದ್ದರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಅಜಂ ಖಾನ್ ಪ್ರತಿಕ್ರಿಯಿಸದಿದ್ದರೂ, ಜೈಲಿನಿಂದ ಬಿಡುಗಡೆಯಾದ ನಂತರ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ "ಇಲ್ಲ ಬಹುಶಃ ಅವರ ಬಳಿ (ಮುಲಾಯಂ) ನನ್ನ ನಂಬರ್ ಇಲ್ಲದಿರಬಹುದು" ಎಂದು ವ್ಯಂಗ್ಯದ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: 88 ಪ್ರಕರಣಗಳಲ್ಲಿ ಆರೋಪಿ ಈ ರಾಜಕಾರಣಿ: 27 ತಿಂಗಳ ನಂತರ ಜೈಲಿನಿಂದ ರಿಲೀಸ್