ಹೈದರಾಬಾದ್: ವಯಸ್ಸು 70 ದಾಟಿದೆ... ಪಾರ್ಶ್ವವಾಯುವಿನಿಂದ ಕೈ ಮತ್ತು ಎಡಗಾಲು ಕೆಲಸ ನಿಲ್ಲಿಸಿದೆ.. ಎರಡು ಹೆಜ್ಜೆ ಮುಂದಿಡಲು ಆಗದ ಅಸಹಾಯಕತೆ... ಮಾನಸಿಕ ಸ್ಥಿತಿ ಹದಗೆಟ್ಟಿದೆ..ಮೈಮೇಲೆ ಹರಿದ ಬಟ್ಟೆ... ರೈಲಿನಲ್ಲಿ ಸಿಕ್ಕ ವೃದ್ಧೆಯೊಬ್ಬಳ ಈ ದಯನೀಯ ಸ್ಥಿತಿಗೆ ಹೆತ್ತ ಮಕ್ಕಳೇ ಕಾರಣ. ಹೌದು, ತನ್ನ ಜೀವ ತೇಯ್ದು ಬೆಳೆಸಿದ ತಾಯಿಗೆ ಮಕ್ಕಳು ಕೊಟ್ಟ ಶಿಕ್ಷೆ ಇದು.
ತೆಲಂಗಾಣದ ಮೆಹಬೂಬ್ ನಗರದ ರೈಲ್ವೆ ನಿಲ್ದಾಣದಲ್ಲಿದ್ದ ವಿಶಾಖಪಟ್ಟಣಂ - ಕಾಚಿಗುಡ ರೈಲಿನಲ್ಲಿ ಈ ವೃದ್ಧೆ ಪತ್ತೆಯಾಗಿದ್ದಾರೆ. ರೈಲ್ವೆ ಸ್ವಚ್ಛಗೊಳಿಸಲು ಸಿಬ್ಬಂದಿ ಬಂದಾಗ ವೃದ್ಧೆ ಇರುವುದು ಗೊತ್ತಾಗಿದೆ. ಬಳಿಕ ಸಖಿ ಕೇಂದ್ರಕ್ಕೆ ಮಾಹಿತಿ ನೀಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಸರು ಜೊನ್ನಲಗಡ್ಡ ಲಕ್ಷ್ಮೀ. ಆಂಧ್ರದ ಕೃಷ್ಣಾ ಜಿಲ್ಲೆಯ ನಿವಾಸಿ. ಈ ತಾಯಿಯನ್ನು ಸಾಕಲು ಆಗದೇ ಮಗನೊಬ್ಬ ರೈಲು ಹತ್ತಿಸಿ ಕಳಿಸಿ ಅಮಾನವೀಯತೆ ತೋರಿದ್ದಾನೆ. ಈ ವೃದ್ಧೆಗೆ ಇಬ್ಬರು ಗಂಡು ಮಕ್ಕಳಿದ್ದು, ಓರ್ವ ಗುಂಟೂರು ಇನ್ನೋರ್ವ ಬೇರೆಡೆ ನೆಲೆಸಿದ್ದಾರೆ. ಈವರೆಗೆ ತಾಯಿ ತನ್ನ ಚಿಕ್ಕ ಮಗನ ಮನೆಯಲ್ಲಿದ್ದರು. ಅಮ್ಮನನ್ನು ಸಾಕಲು ಆಗದಿದ್ದಕ್ಕೆ ಅಣ್ಣನ ಮನೆಗೆ ಒಂದೆರಡು ದಿನ ಹೋಗು, ರೈಲ್ವೆ ಸ್ಟೇಷನ್ಗೆ ಬಂದು ಅಣ್ಣ ಕರೆದುಕೊಂಡು ಹೋಗುತ್ತಾನೆ ಎಂದು ಸುಳ್ಳು ಹೇಳಿ ಕಿರಿಯ ಮಗ ರೈಲು ಹತ್ತಿಸಿ ಕಳಿಸಿದ್ದ. ಅದನ್ನು ನಂಬಿದ ತಾಯಿ ರೈಲು ಹತ್ತಿ ಹೋಗಿದ್ದರು. ಆದ್ರೆ ರೈಲ್ವೆ ಸ್ಟೇಷನ್ಗೆ ಯಾರೂ ಬಂದಿಲ್ಲ. ಇದರಿಂದ ಏನೂ ಗೊತ್ತಾಗದೇ ವೃದ್ಧೆ ರೈಲಿನಲ್ಲಿ ಉಳಿದಿದ್ದರು.
ರೈಲ್ವೆ ನಿಲ್ದಾಣಕ್ಕೆ ಅಣ್ಣ ಬಂದು ಕರೆದುಕೊಂಡು ಹೋಗುತ್ತಾನೆ. ಅಲ್ಲೇ ಒಂದೆರಡು ದಿನ ಇರು. ಬಳಿಕ ನಾನೇ ಬಂದು ವಾಪಸ್ ಕರೆದುಕೊಂಡು ಬರುತ್ತೇನೆ ಎಂದು ನನ್ನ ಮಗ ಹೇಳಿ ರೈಲು ಹತ್ತಿಸಿದ್ದ ಎಂದು ವೃದ್ಧೆ ಹೇಳಿಕೊಂಡಿದ್ದಾರೆ.
(ಓದಿ: ಮುದ್ದು ಕಂದಮ್ಮಗಳಿಗೆ ಹಾಲುಣಿಸಿ ಆರೈಕೆ ಮಾಡಿದ ಕೇರಳ ಪೊಲೀಸರು.. ವಿಡಿಯೋ ವೈರಲ್)