ನವದೆಹಲಿ: ಇಂಧನ ಮತ್ತು ಅನಿಲ ದರ ಏರಿಕೆಯ ವಿರುದ್ಧ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಧ್ವನಿ ಎತ್ತಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರವು ಜನರ ದುಃಖದಿಂದ ಲಾಭ ಗಳಿಸುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿರುವ ಅವರು, ಕೂಡಲೇ ಬೆಲೆಗಳ ಹೆಚ್ಚಳವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಜಿಡಿಪಿಯೂ ಕುಸಿಯುತ್ತಿದ್ದು, ಅನಿಲ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳನ್ನು ಪರಿಶೀಲಿಸದೆ ಏರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಓದಿ:ನವದೆಹಲಿಯ ಕರ್ನಾಟಕ ಭವನದಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ
"ಹೆಚ್ಚುತ್ತಿರುವ ಇಂಧನ ಮತ್ತು ಅನಿಲ ಬೆಲೆಯಿಂದ ಪ್ರತಿಯೊಬ್ಬ ನಾಗರಿಕನಿಗೆ ಎಷ್ಟು ಕಷ್ಟವಾಗುತ್ತಿದೆ ಮತ್ತು ದುಃಖವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ನಾನು ನಿಮ್ಮ ಗಮನಕ್ಕೆ ತರುವ ಸಲುವಾಗಿ ಈ ಪತ್ರ ಬರೆಯುತ್ತಿದ್ದೇನೆ. ಒಂದೆಡೆ ಉದ್ಯೋಗ, ವೇತನ ಮತ್ತು ಮನೆಯ ಆದಾಯದಲ್ಲಿ ಕಡಿತವಾಗುತ್ತಿದೆ. ಮಧ್ಯಮ ವರ್ಗ ಮತ್ತು ಬಡವರು ಬಹುತೇಕ ಎಲ್ಲ ಗೃಹೋಪಯೋಗಿ ವಸ್ತುಗಳು, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾದ್ದರಿಂದ ಅವರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ" ಎಂದು ಕಾಂಗ್ರೆಸ್ ಮುಖ್ಯಸ್ಥರು ಪತ್ರದಲ್ಲಿ ಹೇಳಿದ್ದಾರೆ.
"ದುಃಖಕರ ಸಂಗತಿ ಎಂದರೆ, ಇಂಥ ಕಷ್ಟದ ಸಮಯದಲ್ಲಿ ಜನರ ದುಃಖ ಮತ್ತು ಸಂಕಟಗಳ ನಡುವೆಯೇ ಸರ್ಕಾರ ಲಾಭ ಗಳಿಸಲು ಮುಂದಾಗಿದೆ" ಎಂದು ಸೋನಿಯಾ ಹೇಳಿದ್ದಾರೆ.