ಪ್ರತಿವರ್ಷ ಜೂನ್ 20ರಂದು ವಿಶ್ವ ಸೋಶಿಯಲ್ ಮೀಡಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು ಜಗತ್ತಿನಾದ್ಯಂತ ಜನತೆ ಒಬ್ಬರಿಗೊಬ್ಬರು ಸಂಪರ್ಕದಲ್ಲಿರಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಸೋಶಿಯಲ್ ಮೀಡಿಯಾ ಅತ್ಯಂತ ಪ್ರಮುಖ ವೇದಿಕೆಯಾಗಿದೆ. ಸೋಶಿಯಲ್ ಮೀಡಿಯಾ ಇಂದು ಕೇವಲ ಸಂಪರ್ಕ ಮಾಧ್ಯಮ ಮಾತ್ರವಲ್ಲದೆ ಹಣ ಗಳಿಸುವ ಜೀವನೋಪಾಯದ ಮಾರ್ಗವೂ ಆಗಿದೆ.
ಇಂದಿನ ದಿನಮಾನದಲ್ಲಿ ಬಹುತೇಕ ಪ್ರತಿಷ್ಠಿತ ಕಂಪನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರಚಾರ ಮಾಡಿಕೊಳ್ಳಲು, ಪ್ರತಿಷ್ಠೆ ಹೆಚ್ಚಿಸಲು ಪ್ರತ್ಯೇಕ ಸೋಶಿಯಲ್ ಮೀಡಿಯಾ ಮ್ಯಾನೇಜರ್ಗಳನ್ನೇ ನೇಮಕ ಮಾಡಿಕೊಳ್ಳುತ್ತವೆ ಎಂದರೆ ಇದರ ಮಹತ್ವ ನಮಗೆ ಅರ್ಥವಾಗುತ್ತದೆ. ಮಾಹಿತಿ ಶೇರ್ ಮಾಡಲು, ಹಣ ಗಳಿಸಲು ಪ್ರತಿಯೊಂದು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ತನ್ನದೇ ಆದ ವಿಶಿಷ್ಟ ಕಾರ್ಯವೈಖರಿಯನ್ನು ಹೊಂದಿರುವುದರಿಂದ ಪರಿಣಿತ ಸೋಶಿಯಲ್ ಮೀಡಿಯಾ ಮ್ಯಾನೇಜರ್ಗಳಿಗೆ ಸಾಕಷ್ಟು ಬೇಡಿಕೆ ಇದೆ.
1. ಸೋಶಿಯಲ್ ಮೀಡಿಯಾ ದಿನಾಚರಣೆಯ ಇತಿಹಾಸ: ವಿಶ್ವ ಸೋಶಿಯಲ್ ಮೀಡಿಯಾ ದಿನಾಚರಣೆಯನ್ನು ಪ್ರಥಮ ಬಾರಿಗೆ 30 ಜೂನ್, 2010 ರಂದು ಮಾಶೆಬಲ್ ಕಂಪನಿಯಿಂದ ಆಚರಿಸಲಾಯಿತು. ವಿಶ್ವದ ಮೇಲೆ ಸೋಶಿಯಲ್ ಮೀಡಿಯಾ ಪ್ರಭಾವ ಹಾಗೂ ಜಾಗತಿಕ ಸಂಪರ್ಕ ವ್ಯವಸ್ಥೆಯಲ್ಲಿ ಅದರ ಪಾತ್ರವನ್ನು ಜಗತ್ತಿಗೆ ತೋರಿಸುವುದಕ್ಕಾಗಿ ಇಂಥ ದಿನಾಚರಣೆಯನ್ನು ಆರಂಭಿಸಲಾಯಿತು.
2. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್: ಸೋಶಿಯಲ್ ಮೀಡಿಯಾ ಮೂಲಕ ಒಂದೇ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ನಮ್ಮ ಕುಟುಂಬದವರು ಹಾಗೂ ಗೆಳೆಯರೊಂದಿಗೆ ಸಂಪರ್ಕ ಸಾಧಿಸಬಹುದು. ಇವತ್ತು ಸೋಶಿಯಲ್ ಮೀಡಿಯಾ ವ್ಯಾಪಾರ ವ್ಯವಹಾರದ ಮಾರುಕಟ್ಟೆಯೂ ಆಗಿದೆ. ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣ ಗಳಿಸುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಇದರಲ್ಲೇ ಜೀವನೋಪಾಯ ಕಂಡುಕೊಂಡಿದ್ದಾರೆ.
3. ಹಣಗಳಿಕೆಗೆ ಮಾರ್ಗ ಸೋಶಿಯಲ್ ಮೀಡಿಯಾ: ಯೂಟ್ಯೂಬ್, ಇನ್ದಸ್ಟಾಗ್ರಾಂ ಹೀಗೆ ಹಲವಾರು ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ಸೂಕ್ತವಾಗಿ ಬಳಸಿಕೊಂಡಲ್ಲಿ ಅದರಿಂದ ಪ್ರತಿತಿಂಗಳು ನಿಮ್ಮ ಜೀವನಕ್ಕಾಗುವಷ್ಟು ಹಣ ಸಂಪಾದಿಸಬಹುದು. ಆದರೆ ಇದಕ್ಕಾಗಿ ನಿರ್ದಿಷ್ಟ ವಿಷಯದಲ್ಲಿ ಜ್ಞಾನ ಹಾಗೂ ಸೋಶಿಯಲ್ ಮೀಡಿಯಾ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಗೊತ್ತಿರಬೇಕಾಗುತ್ತದೆ.
4. ಎರಡಲಗಿನ ಕತ್ತಿ, ಅಪಾಯ ಕಟ್ಟಿಟ್ಟ ಬುತ್ತಿ: ಸೋಶಿಯಲ್ ಮೀಡಿಯಾ ಎಂಬುದು ಎರಡಲಗಿನ ಕತ್ತಿ ಎಂಬುದು ನೆನಪಿರಲಿ. ಒಳ್ಳೆಯದಕ್ಕೆ ಇದನ್ನು ಬಳಸಿದರೆ ಅಪಾಯ ಇಲ್ಲ. ಆದರೆ ಯಾವುದೋ ದ್ವೇಷದ ವಿಷಯ ಹರಡುವುದು, ಧಾರ್ಮಿಕ ತ್ವೇಷ ಹೆಚ್ಚಿಸುವಂಥ ಪೋಸ್ಟ್ ಹಾಕುವುದು ಮುಂತಾದ ಕೆಲಸಗಳನ್ನು ಮಾಡಿದರೆ ಪೊಲೀಸರು ಮನೆಗೆ ಬರುವುದು ಗ್ಯಾರಂಟಿ. ಅಷ್ಟೇ ಏಕೆ.. ನಿಮ್ಮ ಯಾವುದೋ ಸೋಶಿಯಲ್ ಮೀಡಿಯಾ ಖಾತೆಯನ್ನು ಮತ್ತೊಬ್ಬರು ಹ್ಯಾಕ್ ಮಾಡಿದರೂ ನಿಮಗೆ ತೊಂದರೆ ತಪ್ಪಿದ್ದಲ್ಲ. ಇಂಥ ಸಂದರ್ಭಗಳಲ್ಲಿ ನಾವು ತಪ್ಪಿತಸ್ಥರಲ್ಲ ಎಂದು ನಿರೂಪಿಸುವ ಹೊತ್ತಿಗೆ ಜೀವನದಲ್ಲಿ ಸಾಕಷ್ಟು ಕಳೆದುಕೊಂಡುಬಿಟ್ಟಿರುತ್ತೇವೆ. ಸೋಶಿಯಲ್ ಮೀಡಿಯಾ ಒಂದು ಅಪಾಯಕಾರಿ ವೇದಿಕೆಯೂ ಹೌದು.
5. ಸೋಶಿಯಲ್ ಮೀಡಿಯಾ ಸತ್ಯ-ಸುಳ್ಳುಗಳ ಕಪಟ ನಾಟಕ: ಸೋಶಿಯಲ್ ಮೀಡಿಯಾದಲ್ಲಿ ಬರುವುದೆಲ್ಲ ಸತ್ಯವಲ್ಲ ಎಂಬುದನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೋ ಸಂದೇಶ, ಇನ್ನಾವುದೋ ವಿಡಿಯೋ ನೋಡಿ ಅದನ್ನು ತಕ್ಷಣ ಯಾರಿಗಾದರೂ ಹಂಚಿಕೊಳ್ಳುವ ಮೂರ್ಖತನ ಮಾಡಲೇಬಾರದು. ಒಂಚೂರು ವಿವಾದಾತ್ಮಕವಾಗಿದ್ದರೂ ಅದನ್ನು ಪುನಃ ಪರಿಶೀಲನೆ ಮಾಡಬೇಕಾಗುತ್ತದೆ. ಕೋಟಿಗಟ್ಟಲೆ ಸಂಖ್ಯೆಯಲ್ಲಿ ಪ್ರತಿದಿನ ತಿರುಚಿದ ವಿಡಿಯೋ, ಸುಳ್ಳು ಸಂದೇಶಗಳು ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುತ್ತವೆ. ಒಂದೇ ಒಂದು ಶೇರ್ ಅಥವಾ ಫಾರ್ವರ್ಡ್ ನಿಮ್ಮನ್ನು ಜೈಲಿಗೆ ಕಳಿಸಬಹುದು. ನೀವು ಮಾಡದ ತಪ್ಪಿಗೆ ಬೆಲೆ ತೆರುವುದು ಎಲ್ಲಿಯಾದರೂ ಇದ್ದರೆ ಅದು ಸೋಶಿಯಲ್ ಮೀಡಿಯಾದಲ್ಲಿ ಅಧಿಕ. ಸಾಕಷ್ಟು ವಿದ್ಯಾವಂತರು ಸಹ ಇಂದು ಫ್ಯಾಕ್ಟ್ ಚೆಕ್ ಮಾಡದೆ ಮಾಹಿತಿಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
6. ಸೋಶಿಯಲ್ ಮೀಡಿಯಾ ಖಾತೆ ತೆರೆಯುವ ಮುನ್ನ ವಿವೇಚನೆ ಇರಲಿ: ಇಂಟರ್ನೆಟ್ ಲೋಕದಲ್ಲಿ ಇಂದು ಸಾವಿರಾರು ರೀತಿಯ ಸೋಶಿಯಲ್ ಮೀಡಿಯಾ ಸೈಟುಗಳಿವೆ ಹಾಗೂ ಅವುಗಳ ಆ್ಯಪ್ಗಳು ಆಯಾ ಆ್ಯಪ್ ಸ್ಟೋರುಗಳಲ್ಲಿವೆ. ಆದರೆ, ಸಿಕ್ಕ ಸಿಕ್ಕ ಎಲ್ಲ ಸೋಶಿಯಲ್ ಮೀಡಿಯಾ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಸೈನಪ್ ಮಾಡುವುದು ಅರಿಯಲ್ಲ. ಜಗತ್ತಿನ ಮಾಹಿತಿ ನೋಡಲು, ಇನ್ನಾರದೋ ಜೊತೆ ಸಂಪರ್ಕದಲ್ಲಿರಲು ಒಂದೋ ಎರಡೋ ಸೋಶಿಯಲ್ ಮೀಡಿಯಾ ಆ್ಯಪ್ಗಳು ಸಾಕು. ಇನ್ನು ಯಾವುದೇ ಸೋಶಿಯಲ್ ಮೀಡಿಯಾ ಆದರೂ ಅದರಲ್ಲಿ ನಿಮ್ಮ ಫೋನ್ ನಂಬರ್, ಮನೆ ವಿಳಾಸ, ಕಚೇರಿ ವಿಳಾಸ, ಕುಟುಂಬದವರ ಫೋಟೊ-ಮಾಹಿತಿ ಹಂಚಿಕೊಳ್ಳುವ ಮುನ್ನ ಹತ್ತು ಬಾರಿ ವಿಚಾರ ಮಾಡುವುದೊಳಿತು.