ನವದೆಹಲಿ: ಕೋವಿಡ್-19 ಸೋಂಕಿತರು ಹಾಗೂ ಪ್ಲಾಸ್ಮಾ ದಾನಿಗಳ ಮಧ್ಯೆ ಸಂಪರ್ಕ ಬೆಸೆಯುವ ಸಲುವಾಗಿ ಇ-ಕಾಮರ್ಸ್ ದೈತ್ಯ ಸ್ನ್ಪಾಪ್ಡೀಲ್ "ಸಂಜೀವನಿ" ಹೆಸರಿನಲ್ಲಿ ಹೊಸ ಡಿಜಿಟಲ್ ಪ್ಲಾಟ್ಫಾರ್ಮವೊಂದನ್ನು ಆರಂಭಿಸಿದೆ. ಈಗಾಗಲೇ ಹಲವಾರು ಸೋಶಿಯಲ್ ಮೀಡಿಯಾ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಗಳು ಈ ರೀತಿಯ ಪೋರ್ಟಲ್ಗಳನ್ನು ಆರಂಭಿಸಿದ್ದು, ಈಗ ಸ್ನ್ಯಾಪ್ಡೀಲ್ ಕೂಡ ಕೋವಿಡ್ ಸೋಂಕಿತರ ನೆರವಿಗೆ ಮುಂದಾಗಿದೆ.
ಭಾರತದ ಚಿಕ್ಕ ಪಟ್ಟಣಗಳು ಹಾಗೂ ನಗರಗಳನ್ನು ಸಹ ಇದು ಬೆಸೆಯುತ್ತದೆ ಹಾಗೂ ಅತ್ಯಂತ ಸುಲಭವಾಗಿ ತನ್ನ ಸಂಜೀವನಿ ಪ್ಲಾಟ್ಫಾರ್ಮನ್ನು ಜನತೆ ಬಳಸಬಹುದಾಗಿದೆ ಎಂದು ಸ್ನ್ಯಾಪ್ಡೀಲ್ ಪ್ರಕಟಣೆಯಲ್ಲಿ ತಿಳಿಸಿದೆ. ಸಂಜೀವನಿ ಪ್ಲಾಟ್ಫಾರ್ಮನ್ನು ವೆಬ್ಸೈಟ್ ಹಾಗೂ ಆ್ಯಪ್ ಎರಡರ ಮೂಲಕವೂ ಬಳಸಬಹುದಾಗಿದೆ.
ಆರಂಭದಲ್ಲಿ ಸ್ನ್ಯಾಪ್ಡೀಲ್ ಕಂಪನಿಯು ತನ್ನ ಸಿಬ್ಬಂದಿಯ ಸಹಾಯಕ್ಕಾಗಿ ಈ ಸಾಧನವನ್ನು ತಯಾರಿಸಿದ್ದು, ಈಗ ಇದನ್ನು ಎಲ್ಲರೂ ಮುಕ್ತವಾಗಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಕೋವಿಡ್ ಮಹಾಮಾರಿಯ ಚಿಕಿತ್ಸೆಯಲ್ಲಿ ಪ್ಲಾಸ್ಮಾದಾನದ ಮಹತ್ವದ ಬಗ್ಗೆ ಸಹ ಈ ಸಾಧನವು ಜನರಲ್ಲಿ ಜಾಗೃತಿ ಮೂಡಿಸಲಿದೆ.
ಸಂಜೀವನಿ ಪ್ಲಾಟ್ಫಾರ್ಮ್ ಬಳಸುವುದು ಹೇಗೆ?
ಸೋಂಕಿತರು ಹಾಗೂ ಸ್ವಇಚ್ಛೆಯಿಂದ ಪ್ಲಾಸ್ಮಾ ದಾನ ಮಾಡಲು ಬಯಸುವವರು ಈ ಪೋರ್ಟಲ್ನಲ್ಲಿ ತಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಮೂಲಕ ನೋಂದಾಯಿಸಿಕೊಳ್ಳಬಹುದು. ತಮ್ಮ ರಕ್ತದ ಗುಂಪು, ವಾಸಸ್ಥಳ ಹಾಗೂ ಯಾವಾಗ ಸೋಂಕು ತಗುಲಿತ್ತು ಮತ್ತು ಯಾವಾಗ ನೆಗೆಟಿವ್ ರಿಪೋರ್ಟ್ ಬಂದಿತ್ತು ಮುಂತಾದ ಮಾಹಿತಿಗಳನ್ನು ಇದಕ್ಕಾಗಿ ನೀಡಬೇಕಾಗುತ್ತದೆ. ಹೀಗೆ ನೋಂದಾಯಿಸಿಕೊಂಡ ಬಳಿಕ ಸ್ನ್ಯಾಪ್ಡೀಲ್ನ ಸರ್ಚ್ ಎಂಜಿನ್, ರೋಗಿಗಳು ಹಾಗೂ ಪ್ಲಾಸ್ಮಾದಾನಿಗಳ ಹೊಂದಾಣಿಕೆಯನ್ನು ಹುಡುಕಿ ತರುತ್ತದೆ.