ಭುವನೇಶ್ವರ್: ಗಂಡು ಮಗು ಹುಟ್ಟಿದೆ ಎಂದು ಹೇಳಿ ಬಳಿಕ ಹುಟ್ಟಿದ್ದು ಹೆಣ್ಣು ಮಗು ಎಂದು ತಂದುಕೊಟ್ಟಿರುವ ಘಟನೆ ಇಲ್ಲಿನ ಕಾಪಿಟಲ್ ಆಸ್ಪತ್ರೆಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಮಗು ತಮ್ಮದು ಎಂದು ದೃಢಪಡಿಸಲು ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು ಇದೀಗ ತಂದೆ ಆಸ್ಪತ್ರೆ ಸಿಬ್ಬಂದಿಯಲ್ಲಿ ಪಟ್ಟು ಹಿಡಿದಿದ್ದಾರೆ.
ಪ್ರಾಣಕ್ರುಷ್ಣ ಪಾರಿಜಾ ಎಂಬ ವ್ಯಕ್ತಿ ಹೆರಿಗೆ ನೋವು ಕಾಣಿಸಿಕೊಂಡ ಹೆಂಡತಿಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಮವಾರ ರಾತ್ರಿ ಗಂಡು ಮಗು ಹುಟ್ಟಿದೆ ಎಂದು ನರ್ಸ್ ಬಂದು ತಂದೆಗೆ ತಿಳಿಸಿದ್ದಾರೆ. ಆದರೆ, ಕೆಲ ಹೊತ್ತಿನ ಬಳಿಕ ಹೆಣ್ಣು ಮಗುವನ್ನು ಅತ್ತೆಯ ಕೈಗೆ ತಂದಿಟ್ಟಿದ್ದಾರೆ ಎಂದು ಪಾರಿಜಾ ಮಾಧ್ಯಮಗಳಿಗೆ ತಿಳಿಸಿದರು.
ಅಷ್ಟೇ ಅಲ್ಲದೇ ಪಾರಿಜಾ, ನರ್ಸ್ ತನಗೆ ಗಂಡು ಮಗು ಹುಟ್ಟಿತು ಎಂದು ಹೇಳುವಾಗ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಮತ್ತು ಇತರರು ಕೂಡ ಅಲ್ಲಿಯೇ ಉಪಸ್ಥಿತರಿದ್ದರು. ಅವರು ಎಲ್ಲರೆದುರೇ ಗಂಡು ಮಗು ಸುದ್ದಿಯನ್ನು ನರ್ಸ್ ತಿಳಿಸಿದ್ದು, ತಮ್ಮ ಮಾತಿಗೆ ಸಾಕ್ಷ್ಯ ಕೂಡ ಇದೆ ಎಂದಿದ್ದಾರೆ.
ಬಾಯ್ತಪ್ಪಿನಿಂದಾದ ಪ್ರಮಾದ: ಆದರೆ, ಆಸ್ಪತ್ರೆ ಸಿಬ್ಬಂದಿ ಹೇಳುವಂತೆ, ನರ್ಸ್ ಬಾಯಿ ತಪ್ಪಾಗಿ ಹೆಣ್ಣು ಬದಲಾಗಿ ಗಂಡು ಎಂದು ಹೇಳಿದ್ದಾರೆ. ಇದು ಅಚಾತುರ್ಯದಿಂದ ನಡೆದಿದೆ. ಆದರೆ, ಪಾರಿಜಾ ಅವರ ಹೆಂಡತಿಗೆ ಜನಿಸಿದ್ದು, ಹೆಣ್ಣು ಮಗು ಎಂದಿದ್ದಾರೆ. ಆದರೆ, ಇದನ್ನು ಒಪ್ಪದ ಪಾರಿಜಾ ಮಾತ್ರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹೆಣ್ಣು ಮಗುವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಮಗುವಿನ ಡಿಎನ್ಎ ಪರೀಕ್ಷೆ ನಡೆಸಿ, ಬಳಿಕವೇ ಅದನ್ನು ಒಪ್ಪುವುದಾಗಿ ವಾದಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಕಾಪಿಟಲ್ ಆಸ್ಪತ್ರೆಯ ನಿರ್ದೇಶಕ ಲಕ್ಷ್ಮಿಂಧರ್ ಸಹೋ, ಇದೊಂದು ಗಂಭೀರ ಪ್ರಕರಣ. ಪ್ರಾಥಮಿಕ ತನಿಖಾ ಮಾಹಿತಿಯಲ್ಲಿ ಪಾರಿಜಾ ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಸಿಬ್ಬಂದಿಯ ಬಾಯ್ತಪ್ಪಿನಿಂದಾಗಿ ಅದು ಗಂಡು ಎಂದು ತಿಳಿಸಲಾಗಿದೆ. ಈ ಪ್ರಕರಣ ಸಂಬಂಧ ಸೂಪರಿಂಟೆಂಡೆಂಟ್, ಹೆಚ್ಚುವರಿ ಸೂಪರಿಂಟೆಂಡೆಂಟ್ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರನ್ನೊಳಗೊಂಡ ಸಮಿತಿ ತನಿಖೆ ನಡೆಸಲಿದೆ ಎಂದರು.
ಒಂದು ವೇಳೆ ಈ ಪ್ರಕರಣವನ್ನು ದೂರುದಾರರ ಕುಟುಂಬಕ್ಕೆ ಮನವರಿಕೆ ಮಾಡಲು ವಿಫಲವಾದರೆ, ಇದನ್ನು ಪೊಲೀಸರಿಗೆ ಒಪ್ಪಿಸಲಾಗುವುದು. ಪೊಲೀಸರು ಈ ಸಂಬಂಧ ನಿರ್ಧಾರ ನಡೆಸಲಿದ್ದು, ಪಿತೃತ್ವ ಸಾಬೀತಿಗೆ ಡಿಎನ್ಎ ಪರೀಕ್ಷೆ ಅವಶ್ಯಕತೆ ಇದೆಯಾ ಎಂಬ ಕುರಿತು ಅವರೇ ನಿರ್ಧರಿಸಲಿದ್ದಾರೆ ಎಂದರು. (ಐಎಎನ್ಎಸ್)
ಇದನ್ನೂ ಓದಿ: ಗಡಿ ಮೀರಿದ ಪ್ರೀತಿಗೆ ದೇಶ-ಭಾಷೆಯ ಹಂಗಿಲ್ಲ: ಕಿವಿ ಕೇಳದ, ಮಾತು ಬಾರದ ಒಡಿಶಾ ಯುವಕನ ಮದುವೆಯಾದ ಜರ್ಮನಿ ಯುವತಿ!