ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಅವರಿಗೆ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪ್ರಸ್ತುತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರರಾಗಿರುವ ಬಂಡೋಪಾಧ್ಯಾಯ ಅವರ ಪತ್ನಿ ಸೋನಾಲಿ ಚಕ್ರವರ್ತಿ ಬಂಡೋಪಾಧ್ಯಾಯ ಅವರಿಗೆ ಕಳೆದ ತಿಂಗಳು ಬೆದರಿಕೆ ಪತ್ರ ಬಂದಿದೆ. ಈ ವೇಳೆ, ಪತಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಸೋನಾಲಿ ಚಕ್ರವರ್ತಿ ಬಂಡೋಪಾಧ್ಯಾಯ ಅವರು ಕೋಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾರೆ. ಮೇಡಂ, ನಿಮ್ಮ ಗಂಡನನ್ನು ಕೊಲ್ಲಲಾಗುತ್ತದೆ. ನಿಮ್ಮ ಗಂಡನ ಜೀವ ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೆದರಿಕೆ ಪತ್ರದಲ್ಲಿ ಬರೆದಿದ್ದರು.
ಬಂಧಿತ ಮೂವರಲ್ಲಿ ಮಾನಸಿಕ ಸ್ಥಿಮಿತತೆ ಇಲ್ಲದ ವೈದ್ಯ ಡಾ. ಅರಿಂದಮ್ ಸೇನ್, ಅವರ ಚಾಲಕ ರಮೇಶ್ ಶಾ ಮತ್ತು ಬಿಜೋಯ್ ಕುಮಾರ್ ಕಯಾಲ್ ಸೇರಿದ್ದಾರೆ.
ಕೆಪಿಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದಿಗೆ ಸಂಬಂಧ ಹೊಂದಿರುವ ಡಾ. ಸೇನ್ ಅವರ ಸಲಹೆಯ ಮೇರೆಗೆ ಕಯಾಲ್ ಬೆದರಿಕೆ ಪತ್ರವನ್ನು ಟೈಪ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮಾನಸಿಕ ಅಸ್ಥಿರತೆಯಿಂದಾಗಿ ವೈದ್ಯ ಸೇನ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆದರಿಕೆ ಪತ್ರ ಬಂದ ನಂತರ ಬಂಡೋಪಾಧ್ಯಾಯ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆರೋಪಿಗಳ ವಿರುದ್ಧ ಹೇರ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.