ಹೈದರಾಬಾದ್(ತೆಲಂಗಾಣ): ಅಪ್ರಾಪ್ತ ಬಾಲಕನೋರ್ವ ಟ್ರ್ಯಾಕ್ಟರ್ ಚಲಾಯಿಸಿ ಆರು ವರ್ಷದ ಬಾಲಕಿಯ ಸಾವಿಗೆ ಕಾರಣವಾಗಿದ್ದಾನೆ. ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ವೇಮುಲವಾಡ ಮಂಡಲ ಮರುಪಾಕ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಹುಡುಗನೋರ್ವ ಟ್ರ್ಯಾಕ್ಟರ್ನ್ನು ಅತಿವೇಗದಿಂದ ಓಡಿಸಿದ ಪರಿಣಾಮ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಹುಡುಗನೊಬ್ಬ ಹಳ್ಳಿಗೆ ಇಟ್ಟಿಗೆ ತರಲು ಟ್ರ್ಯಾಕ್ಟರ್ ಓಡಿಸುತ್ತಿದ್ದ. ರಸ್ತೆಯಲ್ಲಿ ಯಾರೂ ಇಲ್ಲ ಎಂಬ ಉದ್ದೇಶದಿಂದ ಆ ಬಾಲಕ ಅತಿವೇಗದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದಾನೆ. ಟ್ರಾಕ್ಟರ್ ಬಸ್ ನಿಲ್ದಾಣಕ್ಕೆ ಬಂದಾಗ, ಎಮ್ಮೆಗಳ ಸಮೇತ ಮಹಿಳೆಯೊಬ್ಬರು ಬರುತ್ತಿದ್ದರು. ಎಮ್ಮೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಆತನಿಗೆ ತಿಳಿದಿಲ್ಲ. ವೇಗವನ್ನು ನಿಯಂತ್ರಿಸಲಾಗದೆ ಒಮ್ಮೆಲೇ ಬ್ರೇಕ್ ಹಾಕಿದ್ದಾನೆ. ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಬಾಲಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆ ಬದಿಯ ನಾಲೆಗೆ ಬಿದ್ದಿದೆ.
ಆರು ವರ್ಷದ ಬಾಲಕಿ ದೀಕ್ಷಾಶ್ರೀ ಎಂಬುವಳು ಎಮ್ಮೆ ರಸ್ತೆಯಲ್ಲಿ ಬರುತ್ತಿರುವುದನ್ನು ನೋಡಿ ಪಕ್ಕಕ್ಕೆ ನಿಂತಳು. ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ನೇರವಾಗಿ ಬಂದು ದೀಕ್ಷಾಶ್ರೀಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ದೀಕ್ಷಾಶ್ರೀ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಟ್ರ್ಯಾಕ್ಟರ್ನಲ್ಲಿದ್ದ ಇಬ್ಬರು ಬಾಲಕರು ಸುರಕ್ಷಿತವಾಗಿದ್ದಾರೆ.
ಟ್ರ್ಯಾಕ್ಟರ್ ಮಾಲೀಕ ಪರಶುರಾಮುಲು ಅಪ್ರಾಪ್ತ ಬಾಲಕನಿಗೆ ಟ್ರ್ಯಾಕ್ಟರ್ ಚಲಾಯಿಸಲು ನೀಡಿದ್ದಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 2004ರ ನಕಲಿ ಎನ್‌ಕೌಂಟರ್ ಪ್ರಕರಣ: 18 ಪೊಲೀಸರ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್ ಆದೇಶ