ಹೈದರಾಬಾದ್ (ತೆಲಂಗಾಣ): ಆದಿಲಾಬಾದ್ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಅವಾಂತರ ಸೃಷ್ಟಿಸಿದೆ. ಶುಕ್ರವಾರ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದು ಸೇರಿ ಒಟ್ಟು ಐವರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಆದಿಲಾಬಾದ್ ಜಿಲ್ಲೆಯ ಜೈನಾಥ್ ತಾಲೂಕಿನ ಗುಡಾದ ಯಾಸಿಂ (38) ತನ್ನ ಪತ್ನಿ ಜೊತೆಗೆ ಜಮೀನಿನಿಂದ ಮನೆಗೆ ಹೋಗಲು ಗಾಡಿ ತೊಳೆಯುತ್ತಿದ್ದರು. ಈ ವೇಳೆ ಯಾಸಿಂಗೆ ಸಿಡಿಲು ಬಡಿದಿದೆ. ಈ ಘಟನೆಯಲ್ಲಿ ಯಾಸಿಂ ಹಾಗೂ ಆತನ ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೋಮರಂ ಭೀಮ್ ಜಿಲ್ಲೆಯ ವಾಂಕಿಡಿ ತಾಲೂಕಿನ ಕೆಡೆಗಾಂನ ಪತಿ-ಪತ್ನಿ ಗೆದ್ದಂ ಪದ್ಮ (22) ಮತ್ತು ಪತಿ ತುಳ್ಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಧಾರಾಕಾರ ಮಳೆ ಸುರಿದಿದೆ. ಅವರು ಕೂಡಲೇ ಪಕ್ಕದಲ್ಲಿರುವ ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. ಮರಕ್ಕೆ ಸಿಡಿಲು ಬಡಿದು ಪದ್ಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕೆಯ ಪತಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಚಿರ್ಯಾಲ ಜಿಲ್ಲೆಯ ಕೋಟಪಲ್ಲಿ ತಾಲೂಕಿನ ರೊಯ್ಯಲಪಲ್ಲಿಯ ಗೇಣಿದಾರ ರೌಲ ರವೀಂದರ್ (28) ಎಂಬುವರು ಹತ್ತಿ ಹೊಲದಲ್ಲಿ ಕಳೆ ಕೀಳುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮುಳುಗು ಜಿಲ್ಲೆಯ ಮಂಗಪೇಟೆ ಮಂಡಲದ ಕೋತೂರು-ಮೊಟ್ಲಗುಡೆಂ ಪಂಚಾಯಿತಿ ವ್ಯಾಪ್ತಿಯ ಬೊಮ್ಮಾಯಿಗುಡೆಂನ ಈಸಂ ಪವನಕಲ್ಯಾಣ (24) ಗುರುವಾರ ರಾತ್ರಿ ಬೆಳೆ ಕಾಯಲು ಹೋಗಿದ್ದರು. ಭಾರಿ ಮಳೆಯಿಂದಾಗಿ ಮನೆಗೆ ಹಿಂದಿರುಗುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಆದಿಲಾಬಾದ್ ಜಿಲ್ಲೆಯ ಬೇಲಾ ತಾಲೂಕಿನ ಮಾಶಾಲ(ಬಿ) ಪಂಚಾಯತ್‌ನ ಮೋಹನ್ ರಾವಗೌಡ ಎಂಬುವರ ಮಾದವಿ ಕುಸ್ವಂತ್ ರಾವ್ ಅವರು ತಮ್ಮ ಪತ್ನಿ ಸಂಗೀತಾ ಅವರೊಂದಿಗೆ ತಾಳೈಗುಡ ಬಳಿಯ ತಮ್ಮ ಜಮೀನಿನಿಂದ ಎತ್ತಿನ ಗಾಡಿಯಲ್ಲಿ ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ ಸಿಡಿಲು ಬಡಿದೆ. ಘಟನೆಯಲ್ಲಿ ರೈತ ಗಂಭೀರವಾಗಿ ಗಾಯಗೊಂಡಿದ್ದು, ಒಂದು ಎತ್ತು ಸಾವನ್ನಪ್ಪಿದೆ.
ಜಿಲ್ಲೆಯ ಬೋತ್ ತಾಲೂಕಿನ ಪೋಚಾರದ ಯುವ ರೈತ ಕೊಮ್ಮು ರಾಮು (27) ಹತ್ತಿ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಾಗ ಗಾಳಿಯ ರಭಸವಾಗಿ ಬೀಸಿದೆ. ಈ ವೇಳೆ ವಿದ್ಯುತ್ ಕಂಬದ ಮೇಲಿದ್ದ ಇನ್ಸುಲೇಟರ್ ಮುರಿದು ತಂತಿಗಳು ಆತನ ಮೇಲೆ ಬಿದ್ದಿವೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದೇ ತಾಲೂಕಿನ ಬಾಳಾಪುರದಲ್ಲಿ ದೇವಸ್ಥಾನಕ್ಕೆ ತೆರಳಿದ್ದ ಏಳು ಗ್ರಾಮಸ್ಥರು ಎತ್ತಿನ ಗಾಡಿಯಲ್ಲಿ ವಾಪಸ್ ಬರುತ್ತಿದ್ದ ವೇಳೆ ಮಳೆಯ ರಭಸಕ್ಕೆ ಹೋರಿಗಳು ಕಾಲು ಜಾರಿ ಹೊಳೆಗೆ ಬಿದ್ದಿವೆ. ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಏಳು ಜನರ ಪೈಕಿ ಆರು ಜನರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಆದ್ರೆ ಬಾಳಾಪುರದ ರಾವುತ್ ರುಕ್ಮಿಣಿಬಾಯಿ (60) ಅವರನ್ನು ರಕ್ಷಿಸಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ಪರಿಣಾಮ ಅವರು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಓದಿ: ಇಂಟರ್ ಎಕ್ಸಾಂ ಫೇಲ್ ಆದರೂ ವರ್ಷಕ್ಕೆ 27 ಲಕ್ಷ ರೂ. ಸಂಪಾದಿಸುತ್ತಿರುವ ಅನಿಮೇಷನ್ ಕಲಾವಿದ