ಜೋಧಪುರ(ರಾಜಸ್ಥಾನ): ಪಾಕಿಸ್ತಾನಕ್ಕೆ ಮಹತ್ವದ ಭಾರತೀಯ ಸೇನೆಯ ಮಾಹಿತಿ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನೆ ಮತ್ತು ರಾಜ್ಯ ಗುಪ್ತಚರ ಸಂಸ್ಥೆಗಳು ಆರು ಜನರನ್ನು ಬಂಧಿಸಿವೆ. ಸೇನಾ ಮೂಲಗಳ ಪ್ರಕಾರ, ಇದರಲ್ಲಿ ರಜೆಯ ಮೇಲೆ ಬಂದ ಓರ್ವ ಸೇನಾ ಯೋಧ ಕೂಡ ಸೇರಿದ್ದಾನೆ. ಉಳಿದವರು ಪಾಕ್ ಐಎಸ್‌ಐನ ಮಹಿಳಾ ಏಜೆಂಟರುಗಳ ಹನಿ ಟ್ರ್ಯಾಪ್‌ನಲ್ಲಿ ಸಿಕ್ಕಿಬಿದ್ದ ನಾಗರಿಕರಾಗಿದ್ದಾರೆ.
ಐಎಸ್‌ಐನ ಈ ಮಹಿಳಾ ಏಜೆಂಟರಿಗೆ ಇವರು ಹಲವು ಮಹತ್ವದ ಮಾಹಿತಿ ನೀಡಿರುವುದು ತನಿಖೆಯ ವೇಳೆ ಬೆಳಕಿಗೆೆ ಬಂದಿದೆ. ಬಂಧಿತರಲ್ಲಿ ಜೋಧ್‌ಪುರದ ಮೂವರು, ಪಾಲಿಯ ಓರ್ವ ಮತ್ತು ಜೈಸಲ್ಮೇರ್ ಜಿಲ್ಲೆಯ ಇಬ್ಬರು ಸೇರಿದ್ದಾರೆ. ಜೋಧಪುರದಲ್ಲಿ ಇವರೆಲ್ಲರ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಬೇಹುಗಾರಿಕಾ ಪ್ರಕರಣ: ಸೇನಾ ಪತ್ರಗಳನ್ನು ತೆರೆದು ಓದುತ್ತಿದ್ದ ಅಂಚೆ ನೌಕರನಿಗೆ ಸೆ.13ವರೆಗೆ ಪೊಲೀಸ್ ಕಸ್ಟಡಿ
ಐಎಸ್‌ಐನ ರಿಯಾ ಎಂಬ ಮಹಿಳೆ ತನ್ನನ್ನು ಹಿಂದೂ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ನಯವಾಗಿ ಮಾತನಾಡಿ ಜೋಧ್‌ಪುರದ ಮಿಸೈಲ್ ರೆಜಿಮೆಂಟ್‌ನಲ್ಲಿ ನಿಯೋಜಿಸಲಾಗಿದ್ದ 24 ವರ್ಷದ ಪ್ರದೀಪ್ ಕುಮಾರ್ ಎಂಬಾತನನ್ನು ಬಲೆಗೆ ಬೀಳಿಸಿಕೊಂಡಿದ್ದಾಳೆ. ಸುಮಾರು ಐದು ತಿಂಗಳ ಕಾಲ ಆಕೆಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಯೋಧ ಹಲವು ವಿಷಯಗಳನ್ನು ಆಕೆಯೊಂದಿಗೆ ಹಂಚಿಕೊಂಡಿದ್ದನಂತೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.