ಹೈದರಾಬಾದ್: ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಭಾರಿ ಬಹುಮತ ಪಡೆದಿದ್ದು ಐತಿಹಾಸಿಕ ಘಟನೆ. ಅತ್ಯಂತ ಬಲಿಷ್ಠ ಹಾಗೂ ತಂತ್ರಗಾರಿಕೆಯಿಂದ ಕೂಡಿದ ಬಿಜೆಪಿ ಚುನಾವಣಾ ಪ್ರಚಾರದ ಕಾರ್ಯತಂತ್ರವನ್ನೇ ಬುಡಮೇಲು ಮಾಡಿದ್ದು, ದೀದಿಯ ಸಾಧನೆ. ಇದರ ಜೊತೆಗೆ ಮಮತಾ ನಂದಿಗ್ರಾಮದಲ್ಲಿ ಗೆದ್ದಿದ್ದರೆ ಈ ಗೆಲುವು ಇನ್ನೂ ರೋಚಕವಾಗಿರುತ್ತಿತ್ತು. ಆದರೆ, ತನ್ನ ಒಂದು ಕಾಲದ ಶಿಷ್ಯ ಸುವೇಂದು ಅಧಿಕಾರಿ ಎದುರು ಮಮತಾ ಸೋತಿದ್ದು, ಭಾರತೀಯ ಚುನಾವಣಾ ಇತಿಹಾಸದ ರೋಚಕ ಸಂಗತಿಗಳಲ್ಲೊಂದು. ಆದರೆ, ಹೀಗೆ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯೊಬ್ಬರು ಸ್ವಕ್ಷೇತ್ರದಲ್ಲಿ ಚುನಾವಣೆ ಸೋಲುವುದು ಇದು ಪ್ರಥಮವೇನಲ್ಲ. ಇಂತಹ ಹಲವಾರು ಘಟನೆಗಳು ಹಿಂದೆ ಆಗಿ ಹೋಗಿವೆ.
ಅಧಿಕಾರದಲ್ಲಿದ್ದರೂ ಸ್ವಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಸೋತ ಕೆಲ ಪ್ರಮುಖ ರಾಜಕಾರಣಿಗಳ ಮಾಹಿತಿ ಇಲ್ಲಿದೆ:
2021: ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಎದುರು ಸೋಲುಂಡರು.
2019: ರಘುಬರ್ ದಾಸ್
ಬಿಜೆಪಿ ಮುಖಂಡ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ 2019 ರಲ್ಲಿ ಜಮಶೇಡಪುರ ಪಶ್ಚಿಮ ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಬಂಡಾಯ ಅಭ್ಯರ್ಥಿ ಸರಯೂ ರಾಯ್ ಎದುರು ಸೋತರು.
2018: ಲಾಲ್ ಥನ್ವಾಲಾ
ಮಿಜೋರಾಂ ಮುಖ್ಯಮಂತ್ರಿ ಲಾಲ್ ಥನ್ವಾಲಾ 2018ರಲ್ಲಿ ತಾವು ಸ್ಪರ್ಧಿಸಿದ್ದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತಿದ್ದರು. ಸೆರ್ಚಿಪ್ ಕ್ಷೇತ್ರದಲ್ಲಿ ಜೋರಾಂ ಪೀಪಲ್ಸ್ ಮೂವಮೆಂಟ್ ಪಾರ್ಟಿಯ ಲಾಲ್ಡು ಹೋಮಾ ಮತ್ತು ಚಂಪಾಯ್ ದಕ್ಷಿಣ ಕ್ಷೇತ್ರದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷದ ಟಿ.ಜೆ. ಲಾಲನುಂಟ ಲುವಾಂಗ್ಲಾ ವಿರುದ್ಧ ಪರಾಜಿತರಾಗಿದ್ದರು.
2017: ಹರೀಶ ರಾವತ್
ಉತ್ತರಾಖಂಡ ಮುಖ್ಯಮಂತ್ರಿಯಾಗಿದ್ದ ಹರೀಶ ರಾವತ್ 2017 ರಲ್ಲಿ ಹರಿದ್ವಾರ ಗ್ರಾಮೀಣ ಮತ್ತು ಕಿಚ್ಚಾ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದರು.
2017: ಲಕ್ಷ್ಮಿಕಾಂತ ಪರ್ಸೇಕರ
2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಿಕಾಂತ ಪರ್ಸೇಕರ ಮಾಂಡ್ರೆಮ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ದಯಾನಂದ ಸೋಪ್ಟೆ ಎದುರು ಸೋಲನುಭವಿಸಿದ್ದರು.
1989: ಎನ್.ಟಿ. ರಾಮರಾವ್ (ಎನ್ಟಿಆರ್)
1989ರ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಸಿಎಂ ಎನ್ಟಿಆರ್ ಕಲ್ವಕುರ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಿತ್ತರಂಜನ ದಾಸ್ ಎದುರು ಪರಾಜಿತರಾಗಿದ್ದರು.
2009: ಶಿಬು ಸೊರೆನ್
ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಶಿಬು ಸೊರೆನ್ 2009ರಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲುಂಡಿದ್ದರು. ರಾಜಕೀಯಕ್ಕೆ ತೀರಾ ಹೊಸಬರಾಗಿದ್ದ ಜಾರ್ಖಂಡ್ ಪಾರ್ಟಿ ಅಭ್ಯರ್ಥಿ ಕ್ರಿಶನ್ ಪತಾರ್ ಅಲಿಯಾಸ್ ರಾಜಾ ಪೀಟರ್ ಎಂಬುವರ ವಿರುದ್ಧ ತಾಮರ್ ಕ್ಷೇತ್ರದಲ್ಲಿ ಸೊರೆನ್ ಸೋತಿದ್ದರು.
1970: ತ್ರಿಭುವನ್ ನಾರಾಯಣ ಸಿಂಗ್
1970ರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ತ್ರಿಭುವನ್ ನಾರಾಯಣ ಸಿಂಗ್ ವಿಧಾನಸಭಾ ಚುನಾವಣೆ ಸೋತಿದ್ದರಿಂದ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.