ಸಿಕರ್ (ರಾಜಸ್ಥಾನ):ಫತೇಪುರ್ ಶೇಖಾವತಿ ಜಿಲ್ಲೆಗೆ ಸೇರಿದ ಇಬ್ಬರು ಸಹೋದರರು ಕಾಲೇಜೊಂದರ ನಿರ್ಮಾಕ್ಕೆ ಭೂಮಿಯನ್ನು ದಾನವಾಗಿ ನೀಡಿದ್ದು, ಇವರ ಈ ಕಾರ್ಯಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಉದ್ಯಮಿ ಸಹೋದರರನ್ನು ಹೊಗಳುತ್ತಿದ್ದಾರೆ. ಈ ಸಹೋದರರು ದಾವೂದ್ ಹನೀಫ್ ಪಿನಾರಾ ಮತ್ತು ಗುಲಾಮ್ ರಬ್ಬಾನಿ ಪಿನಾರಾ. ಇಬ್ಬರೂ ದುಬೈನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇವರ ತಾಯಿಯ ಪುಣ್ಯತಿಥಿಯ ದಿನದಂದು ಪಿನಾರ ಸಹೋದರರು ಭೂಮಿ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಉನ್ನತ ಶಿಕ್ಷಣ ಪಡೆಯಲು ಹೆಣ್ಣು ಮಕ್ಕಳಿಗೆ ಸಮಸ್ಯೆ: ಫತೇಪುರ್ ಶೇಖಾವತಿಯಲ್ಲಿ ಬಹಳ ವರ್ಷಗಳಿಂದ ಸರ್ಕಾರಿ ಮಹಿಳಾ ಕಾಲೇಜು ಇರಲಿಲ್ಲ, ಹೀಗಾಗಿ ಇಲ್ಲಿನ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅನೇಕ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದು ಬರಿ ಕನಸಾಗಿತ್ತು. ಸರ್ಕಾರಿ ಕಾಲೇಜು ಇಲ್ಲದೇ ಇದ್ದುದರಿಂದ ಅನೇಕ ಹೆಣ್ಣು ಮಕ್ಕಳು ಪ್ರೌಢ ಶಾಲೆಯ ನಂತರ ಉನ್ನತ ಶಿಕ್ಷಣಕ್ಕೆ ಪಡೆಯಲು ಬೆರೆ ಊರಿಗೆ ಹೋಗಲು ಸಾಧ್ಯವಾಗದೇ ತಮ್ಮ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದರು. ಇಲ್ಲಿನ ಸ್ಥಳೀಯ ಶಾಸಕ ಹಕಂ ಅಲಿ ಅವರ ಪ್ರಯತ್ನದಿಂದಾಗಿ ಕಳೆದ ಬಜೆಟ್‌ನಲ್ಲಿ ಸರ್ಕಾರ ಇಲ್ಲಿ ಮಹಿಳಾ ಕಾಲೇಜು ನಿಮಾರ್ಣ ಮಾಡುವುದಾಗಿ ಘೋಷಿಸಿ 6 ಕೋಟಿ ರೂ. ಹಣ ಬಿಡುಗಡೆ ಕೂಡಾ ಮಾಡಿತ್ತು.
80 ಲಕ್ಷ ರೂಪಾಯಿ ಮೌಲ್ಯದ 16 ಬಿಘಾ ಭೂಮಿ ದಾನ ಮಾಡಿದ ಪಿನಾರ ಸಹೋದರರು: ಶಾಸಕ ಮತ್ತು ಸ್ಥಳೀಯರ ಸತತ ಪ್ರಯತ್ನದಿಂದ ಸರ್ಕಾರ ಮಹಿಳಾ ಕಾಲೇಜು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಆದರೆ, ಕಾಲೇಜು ನಿರ್ಮಾಣಕ್ಕೆ ಭೂಮಿ ಲಭ್ಯ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿತ್ತು. ಸರ್ಕಾರಿ ಜಾಗದ ಕೊರತೆಯಿಂದಾಗಿ ಮಹಿಳಾ ಕಾಲೇಜು ನಿರ್ಮಿಸಲು ವಿಳಂಬವಾಗಿತ್ತು.
ಇದರಿಂದ ಕಾಲೇಜಿಗೆ ನಿಗದಿಪಡಿಸಿದ 6 ಕೋಟಿ ರೂ ಅನುದಾನದ ಅವಧಿಯು ಮುಂದಿನ ತಿಂಗಳು ಕೊನೆಗೊಳ್ಳುತ್ತಿತ್ತು. ಈ ವಿಷಯ ತಿಳಿದ ವಿದೇಶದಲ್ಲಿ ವ್ಯಾಪಾರ ಮಾಡುತ್ತಿರುವ, ಡಿಎಚ್‌ಪಿ ಫೌಂಡೇಶನ್‌ನ ಪಿನಾರಾ ಸಹೋದರರು, ತಮ್ಮ ತಾಯಿ ಮರ್ಹುಮಾ ಫಾತಿಮಾ ಜೋಜಾ ಹನೀಫ್ ಪಿನಾರಾ ಅವರ ಪುಣ್ಯತಿಥಿಯಂದು 80 ಲಕ್ಷ ರೂಪಾಯಿ ಮೌಲ್ಯದ 16 ಬಿಘಾ ಭೂಮಿಯನ್ನು ಖರೀದಿಸಿ ಸರ್ಕಾರಕ್ಕೆ ದಾನ ನೀಡಿದ್ದಾರೆ.
ಸಮಾಜಮುಖಿ ಕಾರ್ಯಗಳನ್ನು ಮಾಡಲು ತಮ್ಮದೆ ಡಿಎಚ್‌ಪಿ ಫೌಂಡೇಶನ್ ಸ್ಥಾಪನೆ: ದಾವೂದ್ ಹನೀಫ್ ಪಿನಾರಾ ಮತ್ತು ಗುಲಾಮ್ ರಬ್ಬಾನಿ ಪಿನಾರಾ ಸಹೋದರರಿಬ್ಬರೂ ಸಮಾಜಮುಖಿ ಕಾರ್ಯಗಳನ್ನು ಮಾಡಲು ತಮ್ಮದೇ ಡಿಎಚ್‌ಪಿ ಫೌಂಡೇಶನ್ ಸ್ಥಾಪಿಸಿದ್ದಾರೆ. ಕಳೆದ ವರ್ಷವೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ 12 ಬಿಘಾ ಭೂಮಿಯನ್ನು ದಾನ ಮಾಡಿದ್ದರು. ಇದರಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ. ಪಿನಾರಾ ಸಹೋದರರು ದುಬೈನಲ್ಲಿ ಕಟ್ಟಡ ನಿರ್ಮಾಣ ರಂಗದಲ್ಲಿ ವ್ಯವಹಾರ ಮಾಡುತ್ತಾರೆ.
ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್ನಲ್ಲಿ ಕೇವಲ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಮೂಲಕ ಸೇನಾ ಶಕ್ತಿ ಪ್ರದರ್ಶನ