ಡೆಹ್ರಾಡೂನ್(ಉತ್ತರಾಖಂಡ): ಪಂಜಾಬಿ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಮನ್ಪ್ರೀತ್ ಎಂಬಾತನ ಅರೆಸ್ಟ್ ಮಾಡಿರುವ ಪೊಲೀಸರು ಐದು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಗಾಯಕನ ಕೊಲೆ ನಡೆದ ಕೇವಲ 24 ಗಂಟೆಯೊಳಗೆ ಪಂಜಾಬ್ ಪೊಲೀಸರು ಆರೋಪಿಯನ್ನ ಡೆಹ್ರಾಡೂನ್ನಲ್ಲಿ ಬಂಧನ ಮಾಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಂಧಿತ ಆರೋಪಿ ಮನ್ಪ್ರೀತ್ ಮೂಲತ ಪಂಜಾಬ್ನ ಫರೀದ್ಕೋಟ್ ಜಿಲ್ಲೆಯವರು ಎಂದು ತಿಳಿದು ಬಂದಿದೆ. ದಾಳಿ ಮಾಡಿರುವ ಸಂದರ್ಭದಲ್ಲಿ ಈತನ ಉಪಸ್ಥಿತಿ ಇರಲಿಲ್ಲ.
ಆದರೆ, ದಾಳಿಕೋರರಿಗೆ ಅಗತ್ಯ ಬೆಂಬಲ ನೀಡಿರುವುದು ತಿಳಿದು ಬಂದಿದೆ. ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಭಾನುವಾರ ಸಂಜೆ ಅಪರಿಚಿತ ದುಷ್ಕರ್ಮಿಗಳ ಗುಂಡೇಟಿಗೆ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಬಲಿಯಾಗಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ನಡೆದಿದ್ದು, ಈ ವೇಳೆ, ಸಾವಿರಾರು ಜನರು ಭಾಗಿಯಾಗಿದ್ದರು.
ಇದನ್ನೂ ಓದಿ: ಪಂಜಾಬಿ ಗಾಯಕ ಮೂಸೆವಾಲ ಹತ್ಯೆ: ಆಪ್ ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು
ಮೂಸೆವಾಲಾ ಮೇಲೆ ಹಲ್ಲೆ ನಡೆಸಿದ ಸಂದರ್ಭದಲ್ಲಿ ಸುಮಾರು 24 ಗುಂಡುಗಳು ಅವರ ದೇಹಲ್ಲಿ ಹೊಕ್ಕಿದ್ದವು ಎಂದು ಮರಣೋತ್ತರ ಪರೀಕ್ಷೆ ವೇಳೆ ತಿಳಿದು ಬಂದಿದೆ. ಸಿಧು ಮೂಸೆವಾಲಾ ಹತ್ಯೆಗೆ ಸರ್ಕಾರ ಮತ್ತು ಪೊಲೀಸರ ನಿರ್ಲಕ್ಷ್ಯವೇ ಕಾರಣ. ಅವರಿಗಿದ್ದ ಭದ್ರತೆಯನ್ನು ಪೊಲೀಸರು ಹಿಂತೆಗೆದುಕೊಂಡ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಲಾಗಿದೆ. ಇದನ್ನು ಆಪ್ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿವೆ.