ಅಯೋಧ್ಯೆ: ಮೈಸೂರಿನಿಂದ ಧರ್ಮನಗರಕ್ಕೆ ಆಗಮಿಸಿದ ಖ್ಯಾತ ಧಾರ್ಮಿಕ ಮುಖಂಡ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ಶುಕ್ರವಾರ ಬೆಳಗ್ಗೆ ಸಾವಿರಾರು ಅನುಯಾಯಿಗಳ ಸಮ್ಮುಖದಲ್ಲಿ ಶ್ರೀ ರಾಮನ ಪವಿತ್ರ ನಗರಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಭೂಮಿಪೂಜೆ ನೆರವೇರಿಸಿದರು. ಈ ಆಶ್ರಮವು ಮೈಸೂರಿನ ಅವಧೂತ ದತ್ತ ಪೀಠದ ಶಾಖೆಯಾಗಲಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಯ ಸಹಸ್ರಾರು ಭಕ್ತರು ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶುಕ್ರವಾರ ಬೆಳಗ್ಗೆ ರಾಮಜನ್ಮಭೂಮಿ ಸಂಕೀರ್ಣದಿಂದ 1 ಕಿಲೋಮೀಟರ್ ದೂರದಲ್ಲಿರುವ ಈ ಭೂಮಿಯಲ್ಲಿ ವೇದಘೋಷಗಳ ಮಧ್ಯೆ ಹವನ ಮತ್ತು ಯಜ್ಞಕುಂಡದಲ್ಲಿ ನೈವೇದ್ಯ ಅರ್ಪಿಸಿ ಆಶ್ರಮ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಈ ಆಶ್ರಮದಲ್ಲಿ ಶ್ರೀರಾಮನ ಭವ್ಯವಾದ ಮಂದಿರವನ್ನು ನಿರ್ಮಿಸಲಾಗುವುದು. ಇದಲ್ಲದೇ ಆಶ್ರಮಕ್ಕೆ ಸಂಬಂಧಿಸಿದ ಭಕ್ತರಿಗೆ ತಂಗಲು ಆವರಣದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಮುಖ್ಯವಾಗಿ ದಕ್ಷಿಣ ಭಾರತದಿಂದ ಬರುವ ಭಕ್ತರಿಗೆ ಈ ಆಶ್ರಮದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುವುದು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ಮಹಾರಾಜ್ ಮಾತನಾಡಿ, ಅಯೋಧ್ಯೆ ನಗರವು ವಿಶ್ವದ ಅತ್ಯಂತ ಹಳೇಯ ನಗರವಾಗಿದೆ. ಮರ್ಯಾದಾ ಪುರುಷೋತ್ತಮ ರಾಮ ಹುಟ್ಟಿದ ನಾಡಿದು. ನಾವೆಲ್ಲರೂ ಅವನ ಭಕ್ತರು, ಅವನ ಪ್ರಜೆಗಳು. ಅಯೋಧ್ಯೆಯಲ್ಲೂ ನಮ್ಮ ಅವಧೂತ ದತ್ತ ಪೀಠದ ಶಾಖೆಯಾಗಬೇಕು ಎಂಬುದು ನಮ್ಮ ಪ್ರಯತ್ನವಾಗಿತ್ತು, ಅದಕ್ಕಾಗಿಯೇ ಅಯೋಧ್ಯೆಯಲ್ಲಿ ಸ್ಥಳವನ್ನು ಆಯ್ಕೆ ಮಾಡಿ ಗಣಪತಿ ಸಚ್ಚಿದಾನಂದ ಸ್ವಾಮಿ ಆಶ್ರಮವನ್ನು ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣ 1 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಆಶ್ರಮದಲ್ಲಿ ರಾಮನ ಮಂದಿರವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಇದಲ್ಲದೇ ಭಕ್ತರಿಗೆ ಭಜನೆ ಕೀರ್ತನೆ ಮಾಡಲು ಸ್ಥಳವನ್ನು ನಿರ್ಮಾಣ ಮಾಡಲಾಗುವುದು. ಅದರ ಜೊತೆಗೆ ಅವರಿಗೆ ವಸತಿಯನ್ನು ಕೂಡ ನಿರ್ಮಿಸಲಾಗುವುದು. ಅದರಲ್ಲೂ ದಕ್ಷಿಣ ಭಾರತದಿಂದ ಬರುವ ರಾಮನ ಭಕ್ತರಿಗೆ ಇಲ್ಲಿ ತಂಗಲು ಮತ್ತು ಪೂಜೆ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗುವುದು. ಭೂಮಿ ಪೂಜಾ ಕಾರ್ಯಕ್ರಮದ ಸಮಯದಲ್ಲಿ ಶ್ರೀರಾಮ ಮಂತ್ರ ಮತ್ತು ಹನುಮಾನ್ ಚಾಲೀಸಾವನ್ನು ಸಹ ಪಠಿಸಲಾಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಭಕ್ತರೂ ಪಾಲ್ಗೊಂಡಿದ್ದರು.
ಮುಂದಿನ ವರ್ಷವೇ ರಾಮಮಂದಿರ ಲೋಕಾರ್ಪಣೆ ಸಾಧ್ಯತೆ: ಮುಂದಿನ ವರ್ಷ ಮೊದಲರಾರ್ಧದಲ್ಲಿ ರಾಮಮಂದಿರವನ್ನು ಭಕ್ತರಿಗೆ ಮುಕ್ತಗೊಳಿಸಲು ಸಿದ್ಧತೆ ನಡೆಸುತ್ತಿರುವಂತೆಯೇ ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತಗೊಳಿಸಿದೆ.
ಈ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಮಮಂದಿರ ಉದ್ಘಾಟನೆಗೆ ಬರುವಂತೆ ಜನರನ್ನು ಆಹ್ವಾನಿಸಿದ್ದಾರೆ. ಅಷ್ಟೇ ಅಲ್ಲ ವಿವಿಧ ಕಾಮಗಾರಿಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಶ್ರೀರಾಮನ ಸನ್ನಿಧಿಯಲ್ಲಿ ಮಹಾ ಸಿಎಂ ಶಿಂಧೆ, ಡಿಸಿಎಂ ಫಡ್ನವೀಸ್: ವಿಡಿಯೋ