ಮಧುರವಾಡ (ಆಂಧ್ರಪ್ರದೇಶ): ಇಲ್ಲಿನ ವಿಶೇಷಚೇತನರ ಕಾಲೋನಿಯಲ್ಲಿ ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವನ್ನು ನೆನಪಿಸುವ ರೀತಿಯಲ್ಲಿ ಮಹಿಳೆಯೊಬ್ಬರನ್ನು ದಾರುಣವಾಗಿ ಕೊಲೆ ಮಾಡಿರುವ ಪ್ರಕರಣ ಸಂಚಲನ ಮೂಡಿಸಿದೆ. ಈ ಘಟನೆಯಲ್ಲಿ ಕೊಲೆಯ ನಂತರ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಚೀಲದಲ್ಲಿ ತುರುವಿ ಪ್ಲಾಸ್ಟಿಕ್ ಡ್ರಮ್ನಲ್ಲಿಟ್ಟಿರುವ ಸಂಗತಿ ಭಾನುವಾರ ಬೆಳಕಿಗೆ ಬಂದಿದೆ.
ಮನೆಯಲ್ಲಿ ಬಾಡಿಗೆಗಿದ್ದವರ ಸಾಮಗ್ರಿ ತೆಗೆದುಹಾಕಿ ಮಾಲೀಕರು ಮನೆ ಖಾಲಿ ಮಾಡಿಸಲು ಬಂದಾಗ ಅಚ್ಚರಿಯ ವಿಷಯ ಗೊತ್ತಾಗಿದೆ. ಮಾಲೀಕರು ಬಾರದೇ ಇದ್ದಲ್ಲಿ ಮೃತದೇಹ ಸಂಪೂರ್ಣ ಕೊಳೆತು ಹೋದ ಬಳಿಕ ಪ್ಲಾಸ್ಟಿಕ್ ಚೀಲಗಳನ್ನು ಹೂತು ಹಾಕಲು ಆರೋಪಿಗಳು ಮುಂದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಎಂದು ಶಂಕಿಸಲಾಗಿರುವ ರುಷಿ (40) ಪೊಲೀಸರ ವಶದಲ್ಲಿದ್ದಾನೆ.
ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಸೀತಾಂಪೇಟ್ ರುಷಿಯ ಹುಟ್ಟೂರು. ಬಾಡಿಗೆ ಮನೆಯಲ್ಲಿ ಪತ್ತೆಯಾದ ಶವದ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಶವ ಪರೀಕ್ಷೆಗಾಗಿ ಕೆಜಿಎಚ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ರುಷಿ ಮತ್ತು ಕೊಲೆಯಾದ ಮಹಿಳೆಯ ನಡುವೆ ಹಣಕಾಸಿನ ವ್ಯವಹಾರದಲ್ಲಿ ಏನಾದರೂ ಸಮಸ್ಯೆ ಇತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಎಂಡಾದಲ್ಲಿ ವೆಲ್ಡಿಂಗ್ ಶಾಪ್ ನಡೆಸುತ್ತಿರುವ ಮನೆ ಮಾಲೀಕ ರಮೇಶ್, ಅಂಗವಿಕಲರ ಕಾಲೋನಿಯಲ್ಲಿರುವ ತನ್ನ ಮನೆಯನ್ನು 2019 ರಲ್ಲಿ ರುಷಿ ಕುಟುಂಬಕ್ಕೆ ಬಾಡಿಗೆಗೆ ಕೊಟ್ಟಿದ್ದರು. ಕೆಲವು ವರ್ಷಗಳ ನಂತರ ಆರ್ಥಿಕ ತೊಂದರೆಯಿಂದಾಗಿ ರುಷಿ, ರಮೇಶ್ ಅವರ ಸ್ಥಳದಲ್ಲಿ ವೆಲ್ಡಿಂಗ್ ಸಹಾಯಕರಾಗಿ ಕೆಲಸ ಮಾಡಿದ್ದರು. ಎರಡು ತಿಂಗಳ ನಂತರ ಅವರು ಕೆಲಸ ಬಿಟ್ಟಿದ್ದರು.
ಇದನ್ನೂ ಓದಿ: ನಾಲ್ಕು ಮಕ್ಕಳ ಎದುರೇ ಹೆಂಡ್ತಿ ಮೇಲೆ ಅತ್ಯಾಚಾರ: ಖಾಸಗಿ ಅಂಗಕ್ಕೆ ಪ್ಲಾಸ್ಟಿಕ್ ಪೈಪ್ ಇಟ್ಟು ವಿಕೃತಿ!
ಈ ಹಿನ್ನೆಲೆಯಲ್ಲಿ ಎರಡ್ಮೂರು ತಿಂಗಳಿಗೊಮ್ಮೆ ಬಾಡಿಗೆ ಕಟ್ಟುತ್ತಿದ್ದರು. ರಮೇಶ್ ಅನಾರೋಗ್ಯಕ್ಕೆ ತುತ್ತಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಮನೆಯಲ್ಲೇ ಇರಬೇಕಾಯಿತು. ಆ ಸಮಯದಲ್ಲಿ ರುಷಿ ಬಹಳ ದಿನ ಬಾಡಿಗೆ ಕಟ್ಟಿರಲಿಲ್ಲ. ಸುಮಾರು ವರ್ಷವಾದರೂ ಮನೆ ಖಾಲಿ ಮಾಡಿಯೂ ಇಲ್ಲ. ರಮೇಶ್ ಕರೆ ಮಾಡಿ ಬಾಡಿಗೆ ಕೇಳಿದಾಗ ಇಂದು, ನಾಳೆ ಎನ್ನುತ್ತಿದ್ದ. ಇದರಿಂದ ಕೋಪಗೊಂಡ ರಮೇಶ್ ಮನೆ ಖಾಲಿ ಮಾಡಿಸಿ, ಬೇರೆಯವರಿಗೆ ಬಾಡಿಗೆ ನೀಡಲು ನಿರ್ಧರಿಸಿ ಕುಟುಂಬಸಮೇತ ಬಂದು ಸಾಮಗ್ರಿ ಹೊರ ಹಾಕುತ್ತಿದ್ದಾಗ ಘಟನೆ ಬಯಲಾಗಿದೆ.
ಮೃತದೇಹ ಪತ್ತೆಯಾದ ಮನೆಯ ಮಾಲೀಕರು ನೀಡಿದ ವಿವರ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ದೇಹ ಸಂಪೂರ್ಣ ಕೊಳೆತು ಹೋಗಿದೆ. ಮಹಿಳೆಗೆ ಸಂಬಂಧಿಸಿದ ಯಾವುದೇ ಸುಳಿವು ಸಿಗದ ಕಾರಣ ಪೊಲೀಸರಿಗೆ ಮಹಿಳೆಯನ್ನು ಗುರುತಿಸಲು ಕಷ್ಟವಾಗಿದೆ. ತಲೆ ಸಂಪೂರ್ಣ ಕೊಳೆತಿದೆ. ತಲೆಬುರುಡೆ ಮಾತ್ರ ಉಳಿದಿದೆ. ಮೃತದೇಹ ಕೊಳೆತಿದ್ದರೂ ಸುತ್ತಮುತ್ತಲಿನ ಜನರಿಗೆ ವಾಸನೆ ಬಂದಿರಲಿಲ್ಲ. ವಾಸನೆ ಬಾರದಂತೆ ಆರೋಪಿಗಳು ಯಾವ ರೀತಿಯ ಎಚ್ಚರಿಕೆ ವಹಿಸಿದ್ದರು ಎಂಬ ಸಂಗತಿಯೂ ಗೊತ್ತಾಗಬೇಕಿದೆ.