ತರ್ನ್ ತರನ್: ಪಂಜಾಬ್ನ ತರ್ನ್ ತರನ್ನಲ್ಲಿ ದರೋಡೆಕೋರರು ಮತ್ತು ಪೊಲೀಸರ ನಡುವೆ ಗುರುವಾರ (ನಿನ್ನೆ) ರಾತ್ರಿ ಗುಂಡಿನ ಚಕಮಕಿ ನಡೆದಿದೆ. ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಕುಖ್ಯಾತ ದರೋಡೆಕೋರರು ಪೊಲೀಸರ ಗುಂಡಿನ ದಾಳಿಯಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾರೆ.
ಕೂಡಲೇ ಗಾಯಾಳು ದರೋಡೆಕೋರ ರಾಜು ಮತ್ತು ಆತನ ಸಹಚರನನ್ನು ಪೊಲೀಸರು ಸೆರೆಹಿಡಿದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೆರೆಯಾದ ಆರೋಪಿ ಇಲ್ಲಿಯ ಸಂಘ ಗ್ರಾಮದ ನಿವಾಸಿ ಚರಂಜಿತ್ ಅಲಿಯಾಸ್ ರಾಜು ಶೂಟರ್ ಮತ್ತು ಆತನ ಸಹಚರ ಇಬಾನ್ ಗ್ರಾಮದ ನಿವಾಸಿ ಪರ್ಮಿಂದರ್‌ದೀಪ್ ಸಿಂಗ್ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಮಾಹಿತಿ: ನಿನ್ನೆ ತಡರಾತ್ರಿ ರಾಜು ಶೂಟರ್ ತನ್ನ ಸಹಚರ ಪರ್ಮಿಂದರ್ ಜೊತೆ ಸೇರಿ ದರೋಡೆ ನಡೆಸಲು ಸಂಚು ರೂಪಿಸಿ ಬೈಕ್ನಲ್ಲಿ ತೆರಳುತ್ತಿದ್ದ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಗುರುದ್ವಾರ ಬೀಡ್ ಸಾಹಿಬ್‌ನಿಂದ ಕಾಸೆಲ್ ಗ್ರಾಮಕ್ಕೆ ಹೋಗುವ ರಸ್ತೆಯನ್ನು ತಡೆದಿದ್ದರು. ಇದೇ ವೇಳೆ, ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದ ಈ ಇಬ್ಬರನ್ನು ಪೊಲೀಸರು ತಡೆಯಲು ಮುಂದಾಗಿದ್ದಾರೆ. ಇದನ್ನು ಕಂಡ ಇಬ್ಬರು ಪೊಲೀಸರ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಪೊಲೀಸರೂ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಮತ್ತು ಆರೋಪಿಗಳ ಮಧ್ಯೆ ಸುಮಾರು ಅರ್ಧ ಗಂಟೆಗಳ ಕಾಲ ಗುಂಡಿನ ದಾಳಿ ನಡೆದಿದೆ. ಈ ವೇಳೆ, ಪೊಲೀಸರು ಹಾರಿಸಿದ ಗುಂಡು ಆರೋಪಿ ಶೂಟರ್ ರಾಜು ಕಾಲಿಗೆ ತಗುಲಿದ ಪರಿಣಾಮ ಗಾಯಗೊಂಡಿದ್ದಾನೆ. ಇಬ್ಬರನ್ನು ಸುತ್ತುವರೆದ ಪೊಲೀಸರು ಕೂಡಲೇ ಅವರನ್ನು ಸೆರೆ ಹಿಡಿದು ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಗಳು ಹಾರಿಸಿದ ಎರಡು ಗುಂಡುಗಳು ಪೊಲೀಸ್ ವಾಹನಕ್ಕೆ ತಗುಲಿವೆ.
ಶೂಟರ್ ರಾಜು ವಿರುದ್ಧ 6ಕ್ಕೂ ಹೆಚ್ಚು ಪ್ರಕರಣಗಳು: ಪೊಲೀಸ್ ಮೂಲಗಳ ಪ್ರಕಾರ ಶೂಟರ್ ರಾಜು ವಿರುದ್ಧ ಒಟ್ಟು 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 2 ತಿಂಗಳ ಹಿಂದೆ ಧೋಟಿಯಾ ಗ್ರಾಮದ ಸರ್ಕಾರಿ ಬ್ಯಾಂಕ್ ದರೋಡೆ ಮಾಡಲು ವಿಫಲ ಯತ್ನ ನಡೆಸಿದ್ದ. ಅಲ್ಲದೇ ಪಂಜಾಬ್ ಪೊಲೀಸ್‌ನ ಎಎಸ್‌ಐ ಬಲ್ವಿಂದರ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿರುವ ಪ್ರಕರಣವೂ ಆರೋಪಿ ಮೇಲಿದೆ.
ಇದನ್ನೂ ಓದಿ: ಲೂಧಿಯಾನ ಗ್ಯಾಂಗ್ಸ್ಟರ್, ಪೊಲೀಸರ ನಡುವೆ ಗುಂಡಿನ ದಾಳಿ : ಇಬ್ಬರು ಆರೋಪಿಗಳು ಫಿನಿಶ್..