ತಿರುಪತಿ, ಆಂಧ್ರಪ್ರದೇಶ: ಸುಮಾರು ಒಂದು ವರ್ಷದ ಹಿಂದೆ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದ ಭಿಕ್ಷುಕನ ಮನೆಯನ್ನು ಅಧಿಕಾರಿಗಳು ಜಪ್ತಿ ಮಾಡಲು ಹೋದಾಗ ಅಚ್ಚರಿಗೆ ಒಳಗಾಗಿದ್ದಾರೆ.
ಹೌದು, ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಿದೆ. ಶ್ರೀನಿವಾಸ ಎಂಬ ಭಿಕ್ಷುಕ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದು, ಅಧಿಕಾರಿಗಳು ಮನೆಯಲ್ಲಿದ್ದ ಎರಡು ಟ್ರಂಕ್ಗಳನ್ನು ತೆರೆದಾಗ ನೋಟಿನ ಕಂತೆಗಳನ್ನು ನೋಡಿ ಅವಾಕ್ಕಾಗಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಶೇಷಚಲ ನಗರದಲ್ಲಿ ಶ್ರೀನಿವಾಸ ಅವರಿಗೆ ಒಂದು ಮನೆಯನ್ನು ಮಂಜೂರು ಮಾಡಿತ್ತು. ಶ್ರೀನಿವಾಸ ಅಲ್ಲಿಯೇ ಇದ್ದು, ತಿರುಮಲಕ್ಕೆ ಬರುವ ಭಕ್ತರ ಬಳಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಶ್ರೀನಿವಾಸ ನಿಧನರಾದಾಗ ಅವರ ಸಂಬಂಧಿಗಳು ಯಾರೂ ಇಲ್ಲದ ಕಾರಣ ಒಂದು ವರ್ಷದಿಂದ ಮನೆ ಖಾಲಿಯಾಗಿತ್ತು.
ಇದನ್ನೂ ಓದಿ: ವಿಶ್ವದ ಅತಿ ಉದ್ದದ ಎಲ್ಪಿಜಿ ಪೈಪ್ಲೈನ್ಗೆ ಯೋಜನೆಗೆ ಚಾಲನೆ
ಈಗ ಅಧಿಕಾರಿಗಳು ಮನೆಯನ್ನು ಜಪ್ತಿ ಮಾಡಲು ಬಂದಿದ್ದು, ಮನೆಯಲ್ಲಿದ್ದ ಟ್ರಂಕ್ಗಳನ್ನು ತೆಗೆದುನೋಡಿದಾಗ ನಾಣ್ಯಗಳು, ನೋಟಿನ ಕಂತೆಗಳು ಪತ್ತೆಯಾಗಿವೆ. ಈ ವಿಚಾರವನ್ನು ಟಿಟಿಡಿ ಉನ್ನತ ಅಧಿಕಾರಿಗಳಿಗೆ ರವಾನಿಸಿದ್ದು, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನೋಟು ಎಣಿಸುವ ಯಂತ್ರಗಳನ್ನು ಬಳಸಿ, ಹಣ ಎಣಿಸಲಾಗಿದೆ. ಸುಮಾರು 6.15 ಲಕ್ಷ ರೂಪಾಯಿ ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.