ಉಜ್ಜೈನಿ(ರಾಜಸ್ಥಾನ): ಮದುವೆ ಸಂಭ್ರಮದ ವೇಳೆ ದಿಢೀರ್ ಆಗಿ ವಿದ್ಯುತ್ ಕೈಕೊಟ್ಟಿರುವ ಪರಿಣಾಮ ವಧುಗಳಿಬ್ಬರು ಅದಲು-ಬದಲು ಆಗಿರುವ ಘಟನೆ ರಾಜಸ್ಥಾನದ ಉಜ್ಜೈನಿಯಲ್ಲಿ ನಡೆದಿದೆ. ಸಪ್ತಪದಿಗೋಸ್ಕರ ಹೆಜ್ಜೆ ಹಾಕುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಉಜ್ಜೈನಿಯ ಅಸ್ಲಾನಾದಲ್ಲಿ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಇಬ್ಬರು ವರಗಳಿಗೆ ಮದುವೆ ಸಮಾರಂಭ ನಡೆಯುತ್ತಿದ್ದಾಗ ದಿಢೀರ್ ಆಗಿ ಕರೆಂಟ್ ಕೈಕೊಟ್ಟಿದೆ. ಮದುವೆಯ ಪೂಜೆಯ ಸಮಾರಂಭದಲ್ಲಿ ಇಬ್ಬರು ವಧುಗಳು ಪರಸ್ಪರ ಅದಲು ಬದಲಾಗಿದ್ದಾರೆ.
ಹೀಗಾಗಿ, ತಮ್ಮ ಪತಿ ಜೊತೆ ಕುಳಿತುಕೊಳ್ಳುವ ಬದಲು ಬೇರೆ ವರನೊಂದಿಗೆ ಕುಳಿತುಕೊಂಡು, ಪೂಜೆ ಮಾಡಿದ್ದಾರೆ. ಇದಾದ ಬಳಿಕ ಸಪ್ತಪದಿ ನಡೆಸುತ್ತಿದ್ದಾಗ ಅದಲು-ಬದಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ತಮ್ಮ ತಮ್ಮ ಭಾವಿಪತಿ ಜೊತೆ ಪ್ರದಕ್ಷಿಣೆ ಹಾಕಿಸಲಾಗಿದೆ.
ರಾಜಸ್ಥಾನದ ಅಸ್ಲಾನಾ ಗ್ರಾಮದಲ್ಲಿ ಪ್ರತಿದಿನ ಸಂಜೆ 7ರಿಂದ ರಾತ್ರಿ 12ರವರೆಗೆ ವಿದ್ಯುತ್ ಕಡಿತಗೊಳಿಸಲಾಗ್ತಿದೆ. ಮದುವೆ ಸಮಾರಂಭದ ವೇಳೆ ಸಹ ವಿದ್ಯುತ್ ಕೈಕೊಟ್ಟಿದೆ. ಹೀಗಾಗಿ, ವಧುಗಳು ಅದಲು-ಬದಲಾಗಿದ್ದಾರೆ.
ಮನೆಯಲ್ಲಿರುವ ಪೂಜಾ ಕೋಣೆಗೆ ಹೋದಾಗ ಕರೆಂಟ್ ಹೋಗಿದ್ದರಿಂದ ನಿಕಿತಾ ತಮ್ಮ ಭಾವಿ ಪತಿ ಗಣೇಶ್ನ ಬದಲಿಗೆ ಭೋಲಾ ಕೈಹಿಡಿದಿದ್ದು, ಗಣೇಶ್ನೊಂದಿಗೆ ಕರಿಷ್ಮಾ ಕೈಹಿಡಿದು ಕುಳಿತುಕೊಂಡಿದ್ದಾರೆ. ತದನಂತರ ತರಾತುರಿಯಲ್ಲಿ ಇಬ್ಬರನ್ನ ಬದಲಾಯಿಸಿ, ಸಪ್ತಪದಿ ತುಳಿಸಲಾಗಿದೆ.