ನವದೆಹಲಿ: 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸರ್ವ ಸನ್ನದ್ಧವಾಗಿದೆ. ಈಗಾಗಲೇ ಸಿಎಂ ಹಾಗೂ ಸಚಿವರ ನಡುವಣ ಬಿಕ್ಕಟ್ಟನ್ನು ಪರಿಹರಿಸಿಕೊಂಡಿರುವ ಬಿಜೆಪಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಅವಗಾಹನೆಯಲ್ಲಿ ಮುಂಬರುವ ಚುನಾವಣೆ ಗೆಲ್ಲಲು ಈಗಾಗಲೇ ರಣತಂತ್ರ ರೆಡಿಯಾಗಿದೆ. ಇದೀಗ ಪಕ್ಷ ಧರ್ಮೇಂದ್ರ ಪ್ರಧಾನ ಅವರನ್ನು ಚುನಾವಣೆ ಪ್ರಭಾರಿ ಆಗಿ ನೇಮಕ ಮಾಡಿದ್ದು, ಶೋಭಾ ಕರಂದ್ಲಾಜೆ ಸೇರಿದಂತೆ 7 ಮಂದಿಯನ್ನು ಸಹ ಪ್ರಭಾರಿಗಳಾಗಿ ನೇಮಕ ಮಾಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಕೃಷಿ ಸಹಾಯಕ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ ಅವರನ್ನು ಚುನಾವಣೆ ಸಹ ಪ್ರಭಾರಿ ಆಗಿ ನೇಮಕ ಮಾಡಿದ್ದು, ಹೆಚ್ಚಿನ ಜವಾಬ್ದಾರಿ ವಹಿಸಿದಂತೆ ಆಗಿದೆ. ಇತ್ತೀಚೆಗಷ್ಟೇ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಸಂಪುಟ ಸೇರ್ಪಡೆಯಾಗಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 403 ಸ್ಥಾನಗಳ ಪೈಕಿ 315 ಸ್ಥಾನಗಳನ್ನು ಗೆದ್ದು ದಾಖಲೆ ಮೂಲಕ ಅಧಿಕಾರ ಹಿಡಿದಿತ್ತು. ಸಮಾಜವಾದಿ ಪಾರ್ಟಿ(SP) ಹಾಗೂ ಬಹುಜನ ಸಮಾಜ ಪಾರ್ಟಿ (BSP )ಬಿಜೆಪಿಯನ್ನು ನಿಯಂತ್ರಿಸಲಿದೆ ಅನ್ನೋ ಲೆಕ್ಕಾಚಾರ 2017ರಲ್ಲಿ ತಲೆಕೆಳಗಾಗಿತ್ತು. ಇದೀಗ ಮತ್ತೆ ಇಂತಹದೇ ಫಲಿತಾಂಶವನ್ನು ಪಡೆಯುವ ಹುಮ್ಮಸ್ಸಿನಲ್ಲಿ ಬಿಜೆಪಿ ಇದೆ.
ಪ್ರಹ್ಲಾದ್ ಜೋಶಿಗೆ ಉತ್ತರಾಖಂಡ್ ಉಸ್ತುವಾರಿ:
ಉತ್ತರಾಖಂಡ್ ರಾಜ್ಯದ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಅನಂತ್ ಕುಮಾರ್ ಅವರಿಗೆ ವಹಿಸುತ್ತಿದ್ದಂತೆ, ಈಗ ಪ್ರಹ್ಲಾದ್ ಜೋಶಿ ಅವರಿಗೆ ಜವಾಬ್ದಾರಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.