ಮುಂಬೈ: ಶಿವಶಕ್ತಿ ಮತ್ತು ಭೀಮ್ ಶಕ್ತಿ ಎರಡನ್ನೂ ಒಂದುಗೂಡಿಸಲು ಶಿವಸೇನೆ ಈಗಾಗಲೇ ಪ್ರಯತ್ನಿಸುತ್ತಿದೆ. ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆಗೆ ಹತ್ತಿರವಾಗಬೇಕಾದರೆ ಶಿವಶಕ್ತಿಯ ಜೊತೆಗೆ ಭೀಮಶಕ್ತಿಯೂ ಇರುವುದು ಬಹಳ ಮುಖ್ಯ ಎಂಬುದು ಎರಡೂ ಕಡೆಯವರಿಗೆ ಅರಿವಾಗಿದೆ. ಆದರೆ, ಈ ಪ್ರಯೋಗದಲ್ಲಿ ವೈಯಕ್ತಿಕ ಮಹತ್ವಾಕಾಂಕ್ಷೆ ಯಾವಾಗಲೂ ಒಂದು ಪ್ರಮುಖ ಅಡ್ಡಿಯಾಗಿ ಪರಿಣಮಿಸುತ್ತಿದೆ. ಈಗ ಉದ್ಧವ್ ಠಾಕ್ರೆ ಅವರ ಶಿವಸೇನೆ ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ ಮತ್ತೊಮ್ಮೆ ಒಂದಾಗಲಿವೆ. ಈ ಸಂಬಂಧ ಇಂದು ಪತ್ರಿಕಾಗೋಷ್ಠಿ ನಡೆಯಲಿದೆ.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಪ್ರಬೋಧನ್ ಠಾಕ್ರೆ ಕೂಡ ಸ್ನೇಹಿತರಾಗಿದ್ದರು. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಕೂಡ ಇಬ್ಬರೂ ವಾರಸುದಾರರಿಗೆ ಪರಸ್ಪರರ ಅಗತ್ಯವಿದೆ. ಬಾಳಾಸಾಹೇಬ್ ಠಾಕ್ರೆ ಕಾಲದಿಂದಲೂ ಬಿಜೆಪಿ ‘ಶಿವಶಕ್ತಿ-ಭೀಮಶಕ್ತಿ’ಯನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ. ಆರಂಭದಲ್ಲಿ, ಈ ಒಗ್ಗಟ್ಟಿನ ನಾಯಕನಾಗಿ ರಾಮದಾಸ್ ಅಠವಳೆ ಅವರನ್ನು ಬಿಂಬಿಸಲಾಯಿತು ಹಾಗೂ ಆವರು ತಮ್ಮ ಜೊತೆಗಿದ್ದಾರೆ ಎಂದು ಶಿವಸೇನೆ ಹೇಳಿತ್ತು. ಆದರೆ ಅಠವಳೆ ಬಿಜೆಪಿಯೊಂದಿಗೆ ಹೋದಾಗ ಅವರನ್ನು ದೂರ ಸರಿಸಲಾಯಿತು. ಇಂಥ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಮತ್ತು ಠಾಕ್ರೆಯ ಮೂರನೇ ತಲೆಮಾರಿನವರು ಒಗ್ಗೂಡಿ ಮತ್ತೆ ಶಿವಶಕ್ತಿ ಭೀಮಶಕ್ತಿಯ ಪ್ರಯೋಗ ಆರಂಭಿಸಿದ್ದಾರೆ. ಪ್ರಸ್ತುತ ಇಬ್ಬರಿಗೂ ಪರಸ್ಪರರ ಅಗತ್ಯವಿದೆ.
ವಂಚಿತ್ ಬಹುಜನ್ ಅಘಾಡಿಗೆ ಶೇ 7.64ರಷ್ಟು ಮತ: 2019 ರಲ್ಲಿ ಒಟ್ಟು 48 ಲೋಕಸಭಾ ಸ್ಥಾನಗಳಲ್ಲಿ ಎಐಎಂಐಎಂ ಔರಂಗಾಬಾದ್ ಕ್ಷೇತ್ರದ ಒಂದು ಸ್ಥಾನಕ್ಕೆ ಸ್ಪರ್ಧಿಸಿತ್ತು ಮತ್ತು ಉಳಿದ 47 ಸ್ಥಾನಗಳಲ್ಲಿ ವಂಚಿತ್ ಬಹುಜನ್ ಅಘಾಡಿ ಸ್ಪರ್ಧಿಸಿತ್ತು. ಎಎಂಐಎಂನ ಇಮ್ತಿಯಾಜ್ ಜಲೀಲ್ ಗೆಲುವು ಸಾಧಿಸಿದರು. ಆದಾಗ್ಯೂ ಇವೆರಡು ಪಕ್ಷಗಳ ಬೇರೆ ಯಾವುದೇ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಆ ಚುನಾವಣೆಯಲ್ಲಿ ವಂಚಿತ್ ಅಭ್ಯರ್ಥಿಗಳಿಗೆ 41 ಲಕ್ಷಕ್ಕೂ (ಶೇ 7.64) ಕ್ಕೂ ಹೆಚ್ಚಿನ ಮತಗಳು ಬಂದಿದ್ದರಿಂದ ಈ ಚುನಾವಣೆ ಮಹತ್ವದ್ದಾಗಿದೆ. ರಾಜ್ಯದ 17 ಕ್ಷೇತ್ರಗಳಲ್ಲಿ ವಂಚಿತ್ ಬಹುಜನ ಅಘಾಡಿ ಅಭ್ಯರ್ಥಿಗಳು 80 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ವಂಚಿತ್‌ನ 47 ಅಭ್ಯರ್ಥಿಗಳು ಒಟ್ಟಾರೆ 37,43,200 ಮತಗಳನ್ನು ಪಡೆದಿದ್ಧಾರೆ.
ಇದು ಮಹಾರಾಷ್ಟ್ರದ ಒಟ್ಟು ಮತಗಳ ಶೇ 6.92 ಮತ್ತು ವಂಚಿತ್ ಸ್ಪರ್ಧಿಸಿದ 47 ಕ್ಷೇತ್ರಗಳಲ್ಲಿ (ಔರಂಗಾಬಾದ್ ಹೊರತುಪಡಿಸಿ) ಶೇ 7.08 ಮತಗಳಷ್ಟಾಗುತ್ತದೆ. ಮಹಾರಾಷ್ಟ್ರದ ಎಲ್ಲ 48 ಕ್ಷೇತ್ರಗಳಲ್ಲಿ ಒಟ್ಟು 5,40,54,245 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಔರಂಗಾಬಾದ್ ಕ್ಷೇತ್ರದಲ್ಲಿ 11,98,221 ಮತಗಳು ಚಲಾವಣೆಯಾಗಿವೆ. ನಾಂದೇಡ್, ಸಾಂಗ್ಲಿ, ಸೊಲ್ಲಾಪುರ, ಪರ್ಭಾಣಿ, ಗಢಚಿರೋಲಿ-ಚಿಮೂರ್, ಬುಲ್ಡಾನಾ, ಹಾತಕಣಂಗಲೆ ಈ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳು ಮೂರನೇ ಸ್ಥಾನ ಪಡೆದು ಪರಾಭವಗೊಂಡಿದ್ದಾರೆ. ಈ ಕ್ಷೇತ್ರಗಳಲ್ಲಿ ಪ್ರಮುಖ ಅಭ್ಯರ್ಥಿ ಸೋತಿದ್ದಕ್ಕಿಂತ ಹೆಚ್ಚಿನ ಮತಗಳನ್ನು ವಂಚಿತ್ ಬಹುಜನ ಅಘಾಡಿಯ ಅಭ್ಯರ್ಥಿ ಪಡೆದುಕೊಂಡಿರುವುದು ಗಮನಾರ್ಹ.
2019 ರಲ್ಲಿ ಮುರಿದು ಬಿದ್ದದ್ದ ಎಂಐಎಂ ನೊಂದಿಗಿನ ಮೈತ್ರಿ: 2019 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ವಂಚಿತ್ ಬಹುಜನ್ ಅಘಾಡಿ ಮತ್ತು ಎಂಐಎಂ ಮೈತ್ರಿಯು ಸೆಪ್ಟೆಂಬರ್ 2019 ರಲ್ಲಿ ಮುರಿದುಬಿತ್ತು. ವಂಚಿತ್ ಬಹುಜನ ಅಘಾಡಿ ವಿಧಾನಸಭೆಯ 288 ಕ್ಷೇತ್ರಗಳ ಪೈಕಿ 234 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ವಂಚಿತ್ ಅಘಾಡಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಆದರೆ, ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು 24 ಲಕ್ಷಕ್ಕೂ ಹೆಚ್ಚು ಮತಗಳನ್ನು (ಶೇ 4.6) ಪಡೆದಿದ್ದರು. 10 ಕ್ಷೇತ್ರಗಳಲ್ಲಿ ವಂಚಿತ್‌ನ ಅಭ್ಯರ್ಥಿಗಳು ಎರಡನೇ ಸ್ಥಾನ ಹಾಗೂ ಹಲವು ಕ್ಷೇತ್ರಗಳಲ್ಲಿ ಮೂರನೇ ಸ್ಥಾನದ ಮತಗಳನ್ನು ಪಡೆದರು. ಇದಲ್ಲದೇ ರಾಜ್ಯದ ಸುಮಾರು 21 ಕ್ಷೇತ್ರಗಳಲ್ಲಿ ವಂಚಿತ್ ಬಹುಜನ ಅಘಾಡಿ ಅಭ್ಯರ್ಥಿಗಳು ಸೋತ ಅಭ್ಯರ್ಥಿಗಳ ಅಂತರಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರು.
ಬಿಜೆಪಿ ಮೈತ್ರಿ ಇದ್ದರೂ ಶಿವಸೇನೆ ಗಳಿಸಲು ಸಾಧ್ಯವಾಗಿದ್ದು 56 ಕ್ಷೇತ್ರದಲ್ಲಿ ಮಾತ್ರ: 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸ್ಪರ್ಧಿಸಿದ್ದರೂ ಶಿವಸೇನೆ ಕೇವಲ 56 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಈ ಚುನಾವಣೆಯಲ್ಲಿ ಶಿವಸೇನೆ 90 ಲಕ್ಷದ 49 ಸಾವಿರದ 789 ಮತಗಳನ್ನು ಪಡೆದಿದೆ. ಇದು ಒಟ್ಟು ಚಲಾವಣೆಯಾದ ಮತಗಳ ಶೇ 16.41 ರಷ್ಟು. ಈ ಚುನಾವಣೆಯಲ್ಲಿ ಶಿವಸೇನೆಯ ಮತಗಳು ಶೇ 30ರಷ್ಟು ಕಡಿಮೆಯಾಗಿದ್ದು ಗಮನಿಸಬೇಕಾದ ಅಂಶವಾಗಿದೆ. ವಿದರ್ಭದಲ್ಲಿ ವಿಶೇಷವಾಗಿ ಅಕೋಲಾ, ಅಮರಾವತಿ ಬೆಲ್ಟ್‌ನಲ್ಲಿ ವಿಶೇಷವಾಗಿ ಭೀಮಶಕ್ತಿ ಜೊತೆಗೆ ಇಲ್ಲದ ಕಾರಣ ಶಿವಸೇನೆಗೆ ಹೆಚ್ಚಿನ ಸಹಾಯ ಸಿಗಲಿಲ್ಲ.
ಸೀಟುಗಳ ಹಂಚಿಕೆ ಬಿಕ್ಕಟ್ಟು ಇತ್ಯರ್ಥವಾದರೆ ಮಾತ್ರ ಮೈತ್ರಿ ಸಕ್ಸಸ್: ಅಕೋಲಾ, ನಾಗ್ಪುರ, ಅಮರಾವತಿ, ನಾಂದೇಡ್ ನಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ ಪ್ರಬಲವಾಗಿದೆ. ಈ ಪ್ರದೇಶವನ್ನು ಮೊದಲು ಕಾಂಗ್ರೆಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. ಇಲ್ಲಿ ಕಾಂಗ್ರೆಸ್‌ಗೆ ಗಟ್ಟಿಯಾದ ಮತ ಬ್ಯಾಂಕ್ ಇದೆ. ಆದರೆ, 2019ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅದೇ ಮತಬ್ಯಾಂಕ್‌ಗೆ ವಂಚಿತ್ ಬಹುಜನ ಮೈತ್ರಿಯಿಂದ ಆಘಾತವಾಯಿತು. ಇದರಿಂದಾಗಿ ಈ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಬೇಕಾಯಿತು. ಹೀಗಾಗಿ ಮುಂದೆ ಶಿವಶಕ್ತಿ - ಭೀಮಶಕ್ತಿ ಒಂದಾಗಬೇಕಾದರೆ ಸೀಟುಗಳ ಹಂಚಿಕೆಯ ಬಿಕ್ಕಟ್ಟು ಮೊದಲಿಗೆ ಬಗೆಹರಿಯಬೇಕಾಗುತ್ತದೆ.
ಈ ಬಗ್ಗೆ ಶಿವಸೇನೆ ನಾಯಕ ಹಾಗೂ ವಿಧಾನಪರಿಷತ್ ಉಪಸಭಾಪತಿ ಡಾ. ನೀಲಂ ಗೊರ್ಹೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ ಎಂದಿದ್ದಾರೆ. ಕೆಲ ಸ್ಥಾನಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಆದರೆ ಶಿವಶಕ್ತಿ ಮತ್ತು ಭೀಮಶಕ್ತಿ ಒಂದಾದರೆ ಮಹಾರಾಷ್ಟ್ರ ರಾಜಕೀಯಕ್ಕೆ ಉತ್ತಮ ಬೆಳವಣಿಗೆಯಾಗಲಿದೆ. ಸಮಾಜವನ್ನು ಬೆಸೆಯುವುದು ಬಹಳ ಮುಖ್ಯ. ಆದ್ದರಿಂದ, ಮುಂಬರುವ ಚುನಾವಣೆಗಳು ಮತ್ತು ಪ್ರಜಾಪ್ರಭುತ್ವದ ಸಂವಿಧಾನದ ದೃಷ್ಟಿಯಿಂದ ಇದು ಬಹಳ ಮುಖ್ಯವಾಗಿದೆ ಎಂದು ಡಾ. ನೀಲಂ ಗೊರ್ಹೆ ಹೇಳಿದರು.
ಇದನ್ನೂ ಓದಿ: ನಮ್ಮದು ತತ್ವ ಸಿದ್ಧಾಂತದ ಪಕ್ಷ, ರಮೇಶ್ ಜಾರಕಿಹೊಳಿ ಹೇಳಿಕೆ ವೈಯಕ್ತಿಕ : ಗೋವಿಂದ ಕಾರಜೋಳ