ಮುಂಬೈ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯ ಬಂಧನವಾಗುತ್ತಿದ್ದಂತೆ ಶಿವಸೇನೆ ವಿರುದ್ಧ ಬಿಜೆಪಿ ತೀವ್ರ ರೀತಿಯ ಟೀಕೆಗೆ ಮುಂದಾಗಿತ್ತು. ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿ ಹಲವೆಡೆ ಪ್ರತಿಭಟನೆ ಸಹ ನಡೆಸಿದ್ದರು.
ಈ ಕುರಿತು ಶಿವಸೇನೆ ತನ್ನ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಲೇಖನ ಪ್ರಕಟಿಸಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದೆ. ಇದಲ್ಲದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕುರಿತು ಉಲ್ಲೇಖಿಸಿ ಅರ್ನಬ್ ಗೋಸ್ವಾಮಿ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದೆ.
ಟ್ರಂಪ್ರಂತೆ ಸುಳ್ಳು ಸುದ್ದಿ ಹರಡುವುದು, ಮತದಾನದ ಬಳಿಕ ಮತಗಳ ಎಣಿಕೆ ನಿಲ್ಲಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು ಅಮೆರಿಕ ಕಾನೂನು ಮತ್ತು ಪ್ರತಿಷ್ಠಗೆ ವಿರುದ್ಧವಾಗಿದೆ. ಅದರಂತೆ ಮಹಾರಾಷ್ಟ್ರ ಬಿಜೆಪಿ ನಾಯಕರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳನ್ನು ಬಂಧಿಸುವುದರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಅರ್ನಬ್ ಗೋಸ್ವಾಮಿ ಹೆಸರು ಪ್ರಸ್ತಾಪಿಸದೆ ಶಿವಸೇನೆ ಟೀಕೆ ಮಾಡಿದೆ.
2018ರ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿಯನ್ನು ಬಂಧಿಸಿರುವುದು ರಾಜಕೀಯ ಪ್ರೇರಿತವಾಗಿದ್ದು, ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದೆ ಎಂದು ಬಜೆಪಿ ಆರೋಪಿಸಿತ್ತು.
ಮುಂದುವರಿದು, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ಪ್ರಸ್ತುತ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ನಾಯಕರನ್ನು ಗುಜರಾತ್ ಗಲಭೆ ಪ್ರಕರಣ ಸಂಬಂಧ ತನಿಖೆಗೆ ಒಳಪಡಿಸಲಾಗಿತ್ತು. ಬಳಿಕ ಖುಲಾಸೆಗೊಳಿಸಲಾಯಿತು. ಆದರೆ ಬಿಜೆಪಿ ಎಲ್ಲಿಯೂ ಇದನ್ನೂ ರಾಜಕೀಯ ಪ್ರೇರಿತ ಅಥವಾ ರಾಜಕೀಯ ಹಗೆತನ ಎಂದು ಹೇಳಿಲ್ಲ. ರಿಪಬ್ಲಿಕ್ ಟಿವಿಯಿಂದ ಬಾಕಿ ಪಾವತಿಸದ ಆರೋಪದ ಮೇಲೆ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಅನ್ವಯ್ ನಾಯಕ್ ಅವರ ಕುಟುಂಬಸ್ಥರನ್ನು ಬಿಜೆಪಿ ಕೆಟ್ಟದಾಗಿ ನಿಂದಿಸುತ್ತಿದೆ ಎಂದು ಸೇನೆ ಆರೋಪಿಸಿದೆ.
ಇಷ್ಟೇ ಅಲ್ಲದೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ದಿವಂಗತ ಪಿಎಂ ಇಂದಿರಾ ಗಾಂಧಿ ಅವರೊಂದಿಗೆ ಹೋಲಿಸಿದ್ದ ಪೋಸ್ಟರ್ಗಳನ್ನು ಉಲ್ಲೇಖಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸೇನೆ, ಮಾಜಿ ಪ್ರಧಾನಿಗಳೊಂದಿಗೆ ಹೋಲಿಕೆ ಮಾಡುವುದು ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ತುರ್ತು ಪರಿಸ್ಥಿತಿಯನ್ನು ನೆನಪಿಸುವಂತೆ ದೆಹಲಿಯಲ್ಲಿ ಉದ್ಧವ್ ಠಾಕ್ರೆ ಮತ್ತು ಇಂಧಿರಾ ಗಾಂಧಿ ಅವರ ಪೋಸ್ಟರ್ಗಳನ್ನು ಹಾಕುವ ಮೂಲಕ ಬಿಜೆಪಿ ತಲೆ ಕಟ್ಟ ಹಾಗೆ ಆಡುತ್ತಿದೆ. ಇದು ಬಾಲಿಶತನ ಮಾತ್ರವಲ್ಲ ಅವರ ಅಜ್ಞಾನವೂ ಆಗಿದೆ, ಇಂದಿರಾ ಗಾಂಧಿಯವರೊಂದಿಗೆ ಹೋಲಿಸುವುದು ಹೆಮ್ಮೆಯ ವಿಷಯ ಎಂದು ಉಲ್ಲೇಖಿಸಿದೆ.
ಉಕ್ಕಿನ ಮಹಿಳೆ ಇಂದಿರಾ ಗಾಂಧಿ 1971ರಲ್ಲಿ ಪಾಕಿಸ್ಥಾನವನ್ನು ಇಬ್ಭಾಗ ಮಾಡಿದ್ದರು ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.