ಶಿರಡಿ (ಮಹಾರಾಷ್ಟ್ರ) : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2,000 ರುಪಾಯಿ ಕರೆನ್ಸಿ ನೋಟನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ಶಿರಡಿಯ ಸಾಯಿಬಾಬಾ ದೇವಸ್ಥಾನದ ಕಾಣಿಕೆ ಹುಂಡಿಗೆ 2 ಸಾವಿರ ರುಪಾಯಿ ನೋಟುಗಳನ್ನು ಹಾಕದಂತೆ ಶ್ರೀ ಸಾಯಿ ಸಂಸ್ಥಾನ ಭಕ್ತರಲ್ಲಿ ಮನವಿ ಮಾಡಿದೆ. ಮೇ 19 ರಂದು ಆರ್‌ಬಿಐ ದೇಶದಲ್ಲಿ ಎರಡು ಸಾವಿರದ ನೋಟುಗಳನ್ನು ನಿಷೇಧಿಸುವ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ನಿರ್ಧಾರದ ನಂತರ ಶಿರಡಿ ಸಾಯಿಬಾಬಾ ಸಂಸ್ಥಾನ ಕೂಡಾ ಎಚ್ಚೆತ್ತುಕೊಂಡಿದೆ.
ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮಾತನಾಡಿ, ಸಾಯಿ ಭಕ್ತರು 2,000 ರುಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಆರ್‌ಬಿಐ ಹಿಂಪಡೆದಿರುವುದನ್ನು ಗಮನಿಸಬೇಕು. ದೇವರ ಕಾಣಿಕೆ ಪೆಟ್ಟಿಗೆಯಲ್ಲಿ ರದ್ದಾದ ನೋಟುಗಳನ್ನು ಬಿಟ್ಟು ಚಾಲ್ತಿಯಲ್ಲಿರುವ ನೋಟುಗಳನ್ನು (ಹಣ) ಹಾಕುವಂತೆ ಅವರು ಕೇಳಿಕೊಂಡಿದ್ದಾರೆ.
ನೋಟು ರದ್ದಾದ ಬಳಿಕ ಬಂದಿರುವ ಮಾರ್ಗಸೂಚಿಯ ಪ್ರಕಾರ, ಈ ವರ್ಷದ ಸೆಪ್ಟೆಂಬರ್ 30ರ ಒಳಗೆ ಬ್ಯಾನ್ ಆಗಿರುವ ನೋಟುಗಳನ್ನು ಬ್ಯಾಂಕ್‌ಗೆ ಜಮೆ ಅಥವಾ ವಿನಿಮಯ ಮಾಡಿಕೊಳ್ಳುವಂತೆ ಜನರಿಗೆ ಸೂಚಿಸಲಾಗಿದೆ. ಸಾಮಾನ್ಯವಾಗಿ, ಶಿರಡಿ ಸಾಯಿಬಾಬಾ ಭಕ್ತರು ಕಾಣಿಕೆ ಡಬ್ಬಿಯಲ್ಲಿ ಹಣ, ಆಭರಣ ಹಾಗು ಬೆಲೆ ಬಾಳುವ ಇನ್ನಿತರೆ ವಸ್ತುಗಳನ್ನು ಹಾಕುತ್ತಾರೆ.
2016 ರ ನೋಟು ಅಮಾನ್ಯೀಕರಣದ ಸಮಯದಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದ್ದರೂ ಆ ಮಾರ್ಗವನ್ನು ಹೆಚ್ಚಿನವರು ಬಳಸದೇ, ಸಾಯಿ ಭಕ್ತರು ಸಾಯಿಬಾಬಾ ಸಂಸ್ಥಾನದ ದೇಣಿಗೆ ಪೆಟ್ಟಿಗೆಗೆ ಹಾಕಿದ್ದರು. ಅಂದು ಸಾಯಿ ಸಂಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ ಅವಧಿ ಮುಗಿದರೂ ಸುಮಾರು 71 ಲಕ್ಷ ರೂ ಮೌಲ್ಯದ ಕರೆನ್ಸಿ ಸಂಗ್ರಹವಾಗಿತ್ತು. ಇದು ದೇವಾಲಯದ ಆಡಳಿತ ಮಂಡಳಿಗೆ ತಲೆನೋವು ತರಿಸಿತ್ತು.
ಈ ಅನುಭವದ ಆಧಾರದ ಮೇಲೆ ಸಂಸ್ಥಾನವು ಇದೀಗ ರದ್ದಾಗಿರುವ ₹ 2000 ನೋಟಿನ ನಂತರ ಎಚ್ಚೆತ್ತುಕೊಂಡಿದೆ. ಹೀಗಾಗಿ ಮೊದಲೇ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ. ಆದರೆ ಈ ಬಾರಿ ಕಳೆದ ಸಲದಂತೆ ತೊಂದರೆ, ಗೊಂದಲ ಉಂಟಾಗುವ ಸಾಧ್ಯತೆ ಕಡಿಮೆ. ಯಾಕೆಂದರೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಇನ್ನೂ ಸಾಕಷ್ಟು ಸಮಯಾವಕಾಶ ಇದೆ. ಹೀಗಾಗಿ ಜನರು ನೋಟು ವಿನಿಮಯ ಮಾಡಿಕೊಳ್ಳಬಹುದು.
ಸಾಯಿಬಾಬಾ ದೇವಾಲಯ ಸಂಸ್ಥಾನ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇಣಿಗೆ ಎಣಿಕೆ ಸಂಗ್ರಹಿಸುತ್ತದೆ. ಈ ಮೊತ್ತವನ್ನು ತಕ್ಷಣವೇ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ. ಆದ್ದರಿಂದ, ಎರಡು ಸಾವಿರದ ನೋಟುಗಳು ಬಂದ ತಕ್ಷಣ ಬ್ಯಾಂಕ್‌ಗೆ ನೀಡಲಾಗುತ್ತದೆ. ಅಂದಾಜಿನ ಪ್ರಕಾರ ಆರ್‌ಬಿಐ ನಿರ್ಧಾರದಿಂದ ದೇಣಿಗೆ ಪೆಟ್ಟಿಗೆಯಲ್ಲಿ ಎರಡು ಸಾವಿರದ ನೋಟುಗಳು ಹೆಚ್ಚಾಗಬಹುದು ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರ ನಂತರ ಸಾಯಿ ಸಂಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ ಭಕ್ತರು 2,000 ರೂಪಾಯಿ ನೋಟು ಹಾಕಬಾರದು ಎಂದು ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Explained: 2,000 ರೂ. ಮುಖಬೆಲೆಯ ನೋಟು ಹಿಂಪಡೆದ ಆರ್‌ಬಿಐ ನಿರ್ಧಾರದ ಹಿಂದಿನ ಲೆಕ್ಕಾಚಾರಗಳಿವು..