ಟೋಕಿಯೊ: ಗುಂಡಿನ ದಾಳಿಗೊಳಗಾಗಿರುವ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅಸುನೀಗಿದ್ದಾರೆ. ಅತಿಹೆಚ್ಚು ಕಾಲ ಅಂದರೆ 8 ವರ್ಷಗಳವರೆಗೆ ಜಪಾನ್ ಪ್ರಧಾನಿಯಾಗಿದ್ದ ಶಿಂಜೊ ಶುಕ್ರವಾರ ಬೆಳಗ್ಗೆ ನಾರಾ ಪಟ್ಟಣದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಭಾಷಣ ಮಾಡುತ್ತಿದ್ದಾಗ ಅಪರಿಚಿತನೋರ್ವ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿ ನಡೆಸಿದ 41 ವರ್ಷದ ವ್ಯಕ್ತಿಯನ್ನು ಪೊಲೀಸರು ತಕ್ಷಣ ಬಂಧಿಸಿದ್ದರು.
ಸರ್ಕಾರಿ ಮಾಧ್ಯಮ ಎನ್ಎಚ್ಕೆ ಪ್ರಕಾರ, ಜಪಾನ್ ಸ್ಥಳೀಯ ಕಾಲಮಾನ ಬೆಳಗ್ಗೆ 11.30 ಕ್ಕೆ ನಾರಾ ಪಟ್ಟಣದ ಯಮಾಟೊಸೈದಾಯ್ಜಿ ಸ್ಟೇಷನ್ ಬಳಿ ಶಿಂಜೊ ಅವರು ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಅಭ್ಯರ್ಥಿಯ ಪರವಾಗಿ ಮತಬೇಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಘಟನೆ ಜರುಗಿದೆ.
ಶಿಂಜೋ ಅವರ ಮೇಲೆ ಎರಡು ಬಾರಿ ಗುಂಡು ಹಾರಿಸಲಾಗಿದೆ. ಎರಡನೇ ಗುಂಡು ಹಿಂಬದಿಯಿಂದ ದೇಹ ಹೊಕ್ಕಿದ್ದು, ಅದರಿಂದ ಅವರು ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಾಳಿ ನಡೆಸಿದ ದುಷ್ಕರ್ಮಿಯನ್ನು ನಾರಾ ಪಟ್ಟಣದ ರಹಿವಾಸಿ ಯಾಮಾಗಮಿ ಟೆಟ್ಸುಯಾ ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ಗನ್ ಸ್ಥಳೀಯವಾಗಿ ಕೈಯಿಂದ ತಯಾರಿಸಿರುವ ರೀತಿಯಲ್ಲಿದೆ ಎಂದು ಎನ್ಎಚ್ಕೆ ಮಾಧ್ಯಮಗಳ ಮೂಲಗಳಿಂದ ತಿಳಿದು ಬಂದಿದೆ.
ಅಬೆ ಅವರನ್ನು ಮೆಡೆವ್ಯಾಕ್ನಿಂದ ಕಾಶಿಹಾರಾ ಪಟ್ಟಣದ ನಾರಾ ಮೆಡಿಕಲ್ ಯುನಿವರ್ಸಿಟಿ ಹಾಸ್ಪಿಟಲ್ಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ ಗಂಭೀರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆದಿದ್ದಾರೆ.