ಉದಯಪುರ (ರಾಜಸ್ಥಾನ): ಪ್ರೇಮ ಪ್ರಕರಣದ ಶಂಕೆಯಿಂದಾಗಿ ವಿಧವೆಯೊಬ್ಬರನ್ನು 12 ಕ್ಕೂ ಹೆಚ್ಚು ಮಹಿಳೆಯರು ಅರೆಬೆತ್ತಲೆಗೊಳಿಸಿ, ಥಳಿಸಿ, ಅವರ ಕೂದಲನ್ನು ಕತ್ತರಿಸಿ, ಅರೆಬೆತ್ತಲೆ ಸ್ಥಿತಿಯಲ್ಲೇ ಮಾರುಕಟ್ಟೆ ಉದ್ದಕ್ಕೂ ಓಡಿಸಿರುವ ಅಮಾನವೀಯ ಘಟನೆಯೊಂದು ರಾಜಸ್ಥಾನದ ಉದಯಪುರದಲ್ಲಿ ಬೆಳಕಿಗೆ ಬಂದಿದೆ.
ಅದಕ್ಕಿಂತಲ್ಲೂ ಹೆಚ್ಚಾಗಿ ಮಹಿಳೆಯರು ಸೇರಿ ಒಬ್ಬ ವಿಧವೆಗೆ ಈ ರೀತಿ ಮಾಡುತ್ತಿದ್ದರೆ, ಸುತ್ತಲಿದ್ದ ನಾಗರಿಕ ಸಮಾಜ, ಮೌನವಾಗಿದ್ದದ್ದು ಮಾತ್ರವಲ್ಲದೇ, ಆ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದ ದೃಶ್ಯ ಇನ್ನೂ ಹೀನಾಯವಾಗಿದೆ. ಮಹಿಳೆಗೆ ಥಳಿಸುವ ಸಂಪೂರ್ಣ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆ ಉದಯಪುರದ ದೇವ್ಲಾ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸಂತ್ರಸ್ತ ಮಹಿಳೆ ಉದಯಪುರದಲ್ಲಿ ಹೊಲಿಗೆ ಕೆಲಸ ಮಾಡುತ್ತಿದ್ದು, ಆಕೆಯ ಪತಿ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದಾರೆ.
ಪ್ರೇಮ ಪ್ರಕರಣದ ಶಂಕೆ ಪಟ್ಟು 12ಕ್ಕೂ ಹೆಚ್ಚು ಮಹಿಳೆಯರು ಆಕೆಯ ಅಂಗಡಿಗೆ ಬಂದು, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಅಂಗಡಿಗೆ ಬಂದವರೇ ಸಂತ್ರಸ್ತ ಮಹಿಳೆಯ ಕೂದಲು ಕತ್ತರಿಸಿ, ಅರೆಬೆತ್ತಲೆ ಮಾಡಿದ್ದಾರೆ. ನಂತರ ಆಕೆಗೆ ಥಳಿಸಿ, ಅಲ್ಲಿಂದ ಮಾರುಕಟ್ಟೆಗೆ ಓಡಿಸಿದ್ದಾರೆ. ವಿಧವೆಗೆ ಥಳಿಸುವ ವೇಳೆ ಸಂತ್ರಸ್ತೆಯ ಪುಟ್ಟ ಮಗ ಹೊಡೀಬೇಡಿ ಎಂದು ಅಳುತ್ತಿದ್ದರೂ, ಅದಕ್ಕೆ ಕರಗದೇ ಮಹಿಳೆಯರು ಥಳಿಸುವುದನ್ನು ಮುಂದುವರಿಸಿದ್ದಾರೆ.
ಸುತ್ತಮುತ್ತ ನಿಂತಿದ್ದ ಜನ ಮಧ್ಯಪ್ರವೇಶಿಸಲು ಸಾಕಷ್ಟು ಪ್ರಯತ್ನಿಸಿದರೂ, ಥಳಿಸುತ್ತಿದ್ದ ಆ ಮಹಿಳೆಯರು ಅವರನ್ನು ಹತ್ತಿರ ಬರದಂತೆ ಬೆದರಿಸಿ, ಓಡಿಸಿದ್ದಾರೆ. ಈ ಘಟನೆ ಗುರುವಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಘಟನೆಯ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ವೈರಲ್ ಆಗುತ್ತಿರುವುದನ್ನು ಗಮನಿಸಿದ ಉದಯಪುರ ಎಸ್ಪಿ ಭುವನ್ ಭೂಷಣ್ ಯಾದವ್ ಅವರ ನಿರ್ದೇಶನದ ಮೇರೆಗೆ ಪೊಲೀಸ್ ತಂಡ ಸಂತ್ರಸ್ತ ಮಹಿಳೆಯ ಮನೆಗೆ ಭೇಟಿ ನೀಡಿತ್ತು. ಹಾಗೂ ಗಾಯಗೊಂಡಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಾಗಿದೆ. ಇದೇ ವೇಳೆ ಸಂತ್ರಸ್ತ ಮಹಿಳೆಯಿಂದ ವರದಿ ಪಡೆದು, ಆರೋಪಿ ಮಹಿಳೆಯರ ವಿರುದ್ಧ ದೂರು ದಾಖಲಿಸಿಕೊಂಡು, ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಭುವನ್ ಭೂಷಣ್ ಯಾದವ್ ತಿಳಿಸಿದ್ದಾರೆ.
ಈ ಸಂಬಂಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಇದಕ್ಕಾಗಿ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡಲು ಪೊಲೀಸರು ಸಿದ್ಧರಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭುವನ್ ಭೂಷಣ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ಯುವಕ ಉಗುಳಿದ್ದಕ್ಕೆ ಪೊಲೀಸರಿಂದ ಅಮಾನವೀಯ ಶಿಕ್ಷೆ.. ವಿಡಿಯೋ ವೈರಲ್: ಪೊಲೀಸರ ಅಮಾನತು