ಮುಂಬೈ: ಇಲ್ಲಿನ ಶಕ್ತಿ ಮಿಲ್ನಲ್ಲಿ ಪತ್ರಿಕಾ ಛಾಯಾಗ್ರಾಹಕಿಯ ಮೇಲೆ 7 ವರ್ಷಗಳ ಹಿಂದೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಭಾರತೀಯ ದಂಡ ಸಂಹಿತೆ 376(ಇ) ಅಡಿ ಆಜೀವ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ಎಸ್. ಜಾಧವ್, ಪೃಥ್ವಿರಾಜ್ ಚೌಹಾಣ್ ಅವರಿದ್ದ ಪೀಠ ಈ ಮಹತ್ವದ ಆದೇಶ ನೀಡಿದೆ. 7 ವರ್ಷಗಳ ಹಿಂದೆ ಶಕ್ತಿಮಿಲ್ನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ವಿರುದ್ಧ ಸೆಷನ್ಸ್ ಕೋರ್ಟ್ನಲ್ಲಿ ವಿಚಾರಣೆ ನಡೆದು ಆರೋಪಿಗಳಾಗಿದ್ದ ವಿಜಯ್ ಜಾಧವ್, ಮೊಹಮ್ಮದ್ ಖಾಸಿಂ ಶೇಖ್ ಮತ್ತು ಮೊಹಮ್ಮದ್ ಸಲೀಂ ಅನ್ಸಾರಿ ಅವರು ಅಪರಾಧಿಗಳು ಎಂದು ಕೋರ್ಟ್ ಘೋಷಿಸಿತ್ತು. ಅಲ್ಲದೇ, ಮೂವರಿಗೆ ಮರಣ ದಂಡನೆ ಸಹ ವಿಧಿಸಿತ್ತು.
ಇದನ್ನೂ ಓದಿ: ಅಂಬಾನಿ ಹಿಂದಿಕ್ಕಿ ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟ ಗಿಟ್ಟಿಸಿಕೊಂಡ ಅದಾನಿ
ಸೆಷನ್ಸ್ ನ್ಯಾಯಾಲಯ ನೀಡಿದ ಮರಣದಂಡನೆ ಆದೇಶದ ವಿರುದ್ಧ ಆರೋಪಿಗಳು ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಎಸ್. ಜಾಧವ್, ಪೃಥ್ವಿರಾಜ್ ಚೌಹಾಣ್ ಅವರಿದ್ದ ಪೀಠ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡಿ, ಐಪಿಸಿ ಸೆಕ್ಷನ್ 376(ಇ) ಅಡಿಯ ಪ್ರಕಾರ ಆಜೀವ ಶಿಕ್ಷೆ, ಮರಣದವರೆಗೂ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.