ಆಲಿಘರ್(ಉತ್ತರ ಪ್ರದೇಶ): ಒಬ್ಬ ವ್ಯಕ್ತಿಗೆ ಏನನ್ನಾದರೂ ಸಾಧಿಸಬೇಕು ಎನ್ನುವ ಛಲವಿದ್ದರೆ ದೇಹದ ಅಂಗವೈಕಲ್ಯ ಯಾವುದೇ ತಡೆಯಾಗಲ್ಲ ಎನ್ನುವುದನ್ನು ಉತ್ತರ ಪ್ರದೇಶದ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಶಂಶದ್ ಅಲಿ ತೋರಿಸಿಕೊಟ್ಟಿದ್ದಾರೆ. ಇಂಜಿನಿಯರ್ ಶಂಶದ್ ಅಲಿ ಅವರು ಮಾಡಿರುವ ಆವಿಷ್ಕಾರಗಳಿಗೆ ಭಾರತ ಸರ್ಕಾರ ಏಳು ಪೇಟೆಂಟ್‌ಗಳನ್ನು ನೀಡಿದ್ದು, ಇಂದು 'ಪೇಟೆಂಟ್ ಮ್ಯಾನ್' ಎಂದೇ ಜನಪ್ರಿಯರಾಗಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಅಲಿಗಢ ಜಿಲ್ಲೆಯಲ್ಲಿ ಪೇಟೆಂಟ್‌ಮ್ಯಾನ್ ಎಂದೇ ಖ್ಯಾತರಾಗಿರುವ ಇಂಜಿನಿಯರ್ ಶಂಶದ್ ಅಲಿ ಅವರು ಕಾಲಿನಲ್ಲಿ ವಿಶೇಷಚೇತನರಾಗಿದ್ದಾರೆ. ಆದರೆ, ಅವರ ಸಮರ್ಪಣೆ, ಕಠಿಣ ಪರಿಶ್ರಮ, ಸಾಮರ್ಥ್ಯ, ಆವಿಷ್ಕಾರಗಳು, ಪೇಟೆಂಟ್ ಪ್ರಮಾಣಪತ್ರಗಳ ಸಂಖ್ಯೆ ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಪಾಲಿಟೆಕ್ನಿಕ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಅವರ ಬೋಧನಾ ಸೇವೆಗಳನ್ನು ನೋಡಿದರೆ ಅವರು ವಿಶೇಷಚೇತನರು ಎನ್ನುವುದನ್ನೇ ಮರೆಯಬೇಕು.
ದಿನದಿಂದ ದಿನಕ್ಕೆ ಫೇಮಸ್ ಆಗುತ್ತಿರುವ ಇಂಜಿನಿಯರ್ ಶಂಶಾದ್ ಅಲಿ 2022 ರಲ್ಲಿ ನೀಡಲಾದ ಮೂರು ಪೇಟೆಂಟ್‌ಗಳನ್ನು ಒಳಗೊಂಡಂತೆ, ಅವರ ಆವಿಷ್ಕಾರಗಳಿಗಾಗಿ ಭಾರತ ಸರ್ಕಾರದ ಪೇಟೆಂಟ್ ಕಚೇರಿಯಿಂದ ಒಟ್ಟು ಏಳು ಪೇಟೆಂಟ್‌ಗಳನ್ನು ಅವರ ಹೆಸರಿಗೆ ನೀಡಲಾಗಿದೆ ಮತ್ತು ಇನ್ನೂ ಎರಡು ಪೇಟೆಂಟ್‌ಗಳನ್ನು ಮಂಜೂರು ಮಾಡುವ ನಿರೀಕ್ಷೆಯಿದೆ.
ಸಂಶೋಧಕರಿಗೆ ಶಂಶದ್ ಅಲಿ ಕಿವಿ ಮಾತು: ಆವಿಷ್ಕಾರಗಳನ್ನು ಮಾಡುತ್ತಾ ಪೇಟೆಂಟ್‌ಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವ ಶಂಶದ್ ಅಲಿ ಅವರು ಎಎಂಯುನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಿಕ್ಷಣ ಮತ್ತು ಸೇವೆಗಳ ಜೊತೆ ಜೊತೆಗೆ ಆವಿಷ್ಕಾರಗಳನ್ನೂ ಮಾಡುತ್ತಾ ಇರಿ, ಆಗ ಅವುಗಳಿಗೆ ಪೇಟೆಂಟ್ ಅನುದಾನವನ್ನೂ ಪಡೆಯಬಹುದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ವಿಷಯಗಳನ್ನು ಆವಿಷ್ಕರಿಸಬೇಕು. ಅವುಗಳಿಗೆ ಸರ್ಕಾರದಿಂದ ಪೇಟೆಂಟ್ ಪಡೆಯುವುದರಿಂದ ವಿಶ್ವವಿದ್ಯಾಲಯದ ಶ್ರೇಯಾಂಕವು ಉನ್ನತ ಮಟ್ಟಕ್ಕೆ ಹೋಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
ಕಳೆದ ವರ್ಷ, ಶಂಶದ್ ಅಭಿವೃದ್ಧಿಪಡಿಸಿದ ವಿಶೇಷ ವ್ಯಾಯಾಮ ಸೈಕಲ್‌ಗೆ ಪೇಟೆಂಟ್ ನೀಡಲಾಯಿತು. ವ್ಯಾಯಾಮ ಚಕ್ರದ ವಿಶೇಷತೆ ಎಂದರೆ ಮನೆಯಲ್ಲಿ ವ್ಯಾಯಾಮ ಮಾಡುವಾಗ ಈ ಸೈಕಲ್‌ನಿಂದ ವಿದ್ಯುತ್ ಉತ್ಪಾದಿಸಬಹುದು ಮತ್ತು ಮನೆಯಲ್ಲಿ ಅಡಿಗೆಗೆ ಬಳಸುವ ಮಸಾಲವನ್ನು ಸಹ ರುಬ್ಬಬಹುದು. ಅಂತೆಯೇ, ಕ್ರಿಕೆಟ್ ಬೆಡ್ ಅನ್ನು ಸಹ ಆವಿಷ್ಕಾರ ಮಾಡಿದ್ದು, ನಮ್ಮ ಅಗತ್ಯಕ್ಕೆ ಅನುಗುಣವಾಗಿ ಇದರ ಗಾತ್ರವನ್ನು ಬದಲಾಯಿಸಬಹುದು.
ಪೇಟೆಂಟ್ ಎಂದರೇನು?: ಯಾವುದೇ ಒಬ್ಬ ವ್ಯಕ್ತಿ ಹೊಸತೇನನ್ನೋ ತಯಾರಿಸಿದ ಅಥವಾ ಆವಿಷ್ಕರಿಸಿದನೆಂದರೆ ಅವುಗಳ ಹಕ್ಕ ತಮ್ಮದಾಗಿಸಿಕೊಳ್ಳಲು ಪೇಟೆಂಟ್ ಪಡೆದುಕೊಳ್ಳುವುದು ಅವಶ್ಯಕ. ನಾವು ಹೊಸದಾಗಿ ತಯಾರಿಸಿದ ವಸ್ತುವಿಗೆ ಪೇಟೆಂಟ್ ಪಡೆಯದೇ ಇದ್ದು, ಅದೇ ಥರದ ವಸ್ತುವನ್ನು ಇನ್ನೊಬ್ಬ ತಯಾರಿಸಿ ಅದಕ್ಕೆ ಪೇಟೆಂಟ್ ಪಡೆದಾಗ, ನಾನು ಈ ಮೊದಲೇ ಆ ವಸ್ತುವನ್ನು ತಯಾರಿಸಿದ್ದೆ ಎಂದರೆ ಆ ಮಾತುಗಳಿಗೆ ಯಾವುದೇ ಬೆಲೆ ಇರುವುದಿಲ್ಲ. ಆ ವಸ್ತು ನೀನೇ ತಯಾರಿಸಿದ್ದು ಎನ್ನುವುದಕ್ಕೆ ಯಾವುದೇ ಪುರಾವೆಗಳು ಇರುವುದಿಲ್ಲ. ಹಾಗಾಗಿ ಪೇಟೆಂಟ್ ಪಡೆಯುವುದು ಅವಶ್ಯಕ. ಪೇಟೆಂಟ್ ಎಂದರೆ ಏನು? ಒಂದು ವಸ್ತುವಿನ ಆವಿಷ್ಕಾರಕ್ಕೆ ಅದರ ಮಾಲೀಕರಿಗೆ ವಿಶೇಷ ಅಧಿಕಾರ ಪೇಟೆಂಟ್. ಎಂದರೆ ಒಂದು ವಸ್ತುವಿನ ಮೇಲೆ ಅದರ ನಿಜವಾದ ವಾರಿಸುದಾರರಿಗೆ ನೀಡಲಾಗುವ ಹಕ್ಕು.
ಈ ಪೇಟೆಂಟ್ ಅನ್ನು ಸರ್ಕಾರ ಕೊಡುತ್ತದೆ. ಆವಿಷ್ಕಾರ ಮಾಡಿದ ವ್ಯಕ್ತಿಗೆ ತನ್ನ ಆವಿಷ್ಕಾರವನ್ನು ತಯಾರಿಸಲು, ಬಳಸಲು ಮತ್ತು ಮಾರಾಟ ಮಾಡಲು ನೀಡುವ ವಿಶೇಷ ಹಕ್ಕು. ಪೇಟೆಂಟ್ ನೀಡಲು ದೇಶದಲ್ಲಿ ಭಾರತೀಯ ಪೇಟೆಂಟ್ ಕಾಯ್ದೆಯಿದೆ. 1970ರಲ್ಲಿ ಭಾರತದಲ್ಲಿ ಪೇಟೆಂಟ್ ಕಾನೂನು ಜಾರಿಗೆ ಬಂದಿತು. 1999 ಹಾಗೂ 2000 ರಲ್ಲಿ ಈ ಕಾನೂನಿಗೆ ತಿದ್ದುಪಡಿ ತರಲಾಗಿದೆ. 2004ರಲ್ಲಿ ಮತ್ತೊಂದು ತಿದ್ದುಪಡಿ ತರಲಾಗಿದೆ. ಒಬ್ಬ ವ್ಯಕ್ತಿ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿರುವ ವ್ಯಕ್ತಿ ಅಥವಾ ಕಂಪನಿಯಾ ಪೂರ್ವಾಪರ, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸರ್ಕಾರ ಇಂತಿಷ್ಟು ವರ್ಷದವರೆಗೆ ಎಂದು ಪೇಟೆಂಟ್ ಅಧಿಕಾರವನ್ನು ಕೊಡುತ್ತದೆ.
ಒಂದು ವೇಳೆ ಆ ಆವಿಷ್ಕಾರದಿಂದ ಪ್ರಕೃತಿಗೆ ಅಥವಾ ಸಮಾಜಕ್ಕೆ ಹಾನಿಯಾಗುತ್ತದೆ ಎಂದಿದ್ದರೆ ಅವುಗಳಿಗೆ ಸರ್ಕಾರ ಪೇಟೆಂಟ್ ನೀಡುವುದಿಲ್ಲ. ಅಷ್ಟೇ ಅಲ್ಲ ಎಲ್ಲಾ ಹೊಸ ಆವಿಷ್ಕಾರಗಳಿಗೆ ಭಾರತೀಯ ಪೇಟೆಂಟ್ ಕಾಯ್ದೆಯಡಿ ಪೇಟೆಂಟ್ ಪಡೆಯಲಾಗುವುದಿಲ್ಲ. ಹೀಗೆ ಪೇಟೆಂಟ್ ಪಡೆದ ಮೇಲೆ ಯಾರಾದರೂ ಪೇಟೆಂಟ್ ಪಡೆದಿರುವ ವಸ್ತು, ಲೋಗೋ ಅಥವಾ ಯಾವುದನ್ನೇ ಆಗಲಿ ಇತರರು ಬಳಸಿದರೆ ಅದರ ವಾರೀಸುದಾರ ಅವರ ಮೇಲೆ ಕೇಸ್ ದಾಖಲಿಸಬಹುದು.
ಪೇಟೆಂಟ್ ಪಡೆಯುವುದು ಹೇಗೆ?: ಪೇಟೆಂಟ್ ಪಡೆಯಬೇಕಾದರೆ ಮೊದಲು ಪೇಟೆಂಟ್ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅದರಲ್ಲೂ ಆ ಆವಿಷ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿರುವ ಮೊದಲಿಗರು ನಾವಾಗಿರಬೇಕು. ಅರ್ಜಿ ಜೊತೆಗೆ ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. ನಾವು ಸಲ್ಲಿಸುವ ಅರ್ಜಿಯಲ್ಲಿ ನಮ್ಮ ಸಂಶೋಧನೆಯ ಬಗೆಗಿನ ಸಂಪೂರ್ಣ ವಿವರವನ್ನು ನೀಡಿರಬೇಕು. ಪೇಟೆಂಟ್ಗೆ ಅರ್ಜಿ ಸಲ್ಲಿಸಿದ ಸುಮಾರು 24 ರಿಂದ 36 ತಿಂಗಳುಗಳ ನಂತರ ಪೇಟೆಂಟ್ ಸಿಗುತ್ತದೆ. ಒಂದು ಬಾರಿ ಪೇಟೆಂಟ್ ದೊರೆತ ನಂತರ 20 ವರ್ಷಗಳ ವರೆಗೆ ಆತ ಆ ವಸ್ತುವಿನ ಸಂಪೂರ್ಣ ಮಾಲೀಕನಾಗಿರುತ್ತಾನೆ.
ಇದನ್ನೂ ಓದಿ: ಫೋಲ್ಡ್ ಸೈಕಲ್ ವಿನ್ಯಾಸಗೊಳಿಸಿ ಪೇಟೆಂಟ್ ಪಡೆದ ಕಾಲೇಜು ಪ್ರಾಧ್ಯಾಪಕ