ಬಿಜಾಪುರ (ಛತ್ತೀಸ್ಗಢ): ಭದ್ರತಾ ಪಡೆಗಳು ಕೈಗೊಂಡಿದ್ದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಏಳು ಮಂದಿ ನಕ್ಸಲರನ್ನು ಛತ್ತೀಸ್ಗಢದದ ಬಿಜಾಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಂಗಲೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ನಾಲ್ವರು ನಕ್ಸಲರನ್ನು, ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ನಕ್ಸಲರನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮೂರಡಿ ಎತ್ತರದ ಯುವಕನಿಗೆ ಮದುವೆಗೆ ಹುಡುಗಿ ಸಿಗ್ತಿಲ್ಲ: ಸಿಎಂ ಯೋಗಿಗೆ ಪತ್ರ ಬರೆದ ಅಜೀಂ
ಈ ಎರಡೂ ಪ್ರದೇಶಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆದಿದ್ದು, ಭದ್ರತಾ ಪಡೆಗಳೊಂದಿಗೆ ಜಿಲ್ಲಾ ಪಡೆ ಮತ್ತು ಜಿಲ್ಲಾ ಮೀಸಲು ಗಾರ್ಡ್ಗಳು ಭಾಗಿಯಾಗಿದ್ದವು. ವಿಷ್ಣು ತತಿ (28), ಬಸ್ರಾ ಮಂಗು(29), ಗಂಗಲೂರ್ ಬಳಿಯ ಪಲ್ನಾರ್ ಗ್ರಾಮದಲ್ಲಿ ಮಂಗಳವಾರ ಸೆರೆಸಿಕ್ಕಿದ್ದಾರೆ. ಇವರ ಮೇಲೆ ಪೊಲೀಸರ ಮೇಲೆ ದಾಳಿ ಮತ್ತು ಹತ್ಯೆಯ ಆರೋಪವಿದೆ.
ಸೋಮವಾರ ಮೋಟಿ ತತಿ (32), ಪಕ್ಲು ತತಿ (36) ತೊಡ್ಕಾ ಗ್ರಾಮದಲ್ಲಿ ಸೆರೆಸಿಕ್ಕಿದ್ದು, ಇವರ ಮೇಲೆ ಹಿಂದಿನ ವರ್ಷ ಆಗಸ್ಟ್ನಲ್ಲಿ ಮತ್ತು ಫೆಬ್ರವರಿಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪವಿದೆ.
ಬಸಗುಡದಿಂದ ಸೋಧಿ ಸಿಂಗ(21), ಸುರೇಶ್ ಬಸ್ರಾ(27), ಪೊಟ್ನಾಂ ಬುದ್ರಾಂ (27) ಎಂಬುವವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.