ಡೆಹ್ರಾಡೂನ್ (ಉತ್ತರಾಖಂಡ): ಹರಿದ್ವಾರದ ಮಹಾಕುಂಭಮೇಳ ಸಂದರ್ಭದಲ್ಲಿ ನಡೆದಿರುವ ಕೋವಿಡ್ ಪರೀಕ್ಷಾ ಹಗರಣವು ಒಂದು ಗಂಭೀರ ಅಪರಾಧವಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಆಗ್ರಹಿಸಿದ್ದಾರೆ.
ಇದೊಂದು ಆರ್ಥಿಕ ಅಪರಾಧವಾಗಿದೆ. ಮಹಾಕುಂಭಮೇಳದ ಸಂದರ್ಭದಲ್ಲಿ ದೆಹಲಿ ಮತ್ತು ಹರಿಯಾಣದ ಲ್ಯಾಬ್ಗಳಲ್ಲಿ ಕೊರೊನಾ ಟೆಸ್ಟ್ ಮಾಡಿಸಲಾಯಿತು. ಇದರಲ್ಲಿ ಹಗರಣ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ಕೋವಿಡ್ ತಪಾಸಣಾ ಕೇಂದ್ರಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಉತ್ತರಾಖಂಡ ಸರ್ಕಾರ ಹರಿದ್ವಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಕುಂಭಮೇಳ ಸಂದರ್ಭದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಕನಿಷ್ಠ 1 ಲಕ್ಷ ವರದಿಗಳು ನಕಲಿ ಎಂದು ತಿಳಿದು ಬಂದಿದೆ. ಮಹಾ ಕುಂಭಮೇಳವು ಹರಿದ್ವಾರ ಮತ್ತು ಋಷಿಕೇಶದಲ್ಲಿ 2021 ರ ಏಪ್ರಿಲ್ 1 ರಿಂದ 30 ರವರೆಗೆ ನಡೆಯಿತು. ಇದರಲ್ಲಿ ಡೆಹ್ರಾಡೂನ್ ಜಿಲ್ಲೆಯ ಋಷಿಕೇಶ, ತೆಹ್ರಿಯ ಮುನಿ ಕಿರೆತಿ ಮತ್ತು ಪೌರಿಯ ಸ್ವರ್ಗಾಶ್ರಮ ಸೇರಿವೆ.
ಕೋವಿಡ್ ಲಸಿಕೆ ಪಡೆಯಲು ಜನತೆ ಹಿಂದೇಟು ಹಾಕುತ್ತಿರುವ ಬಗ್ಗೆ ಮಾತನಾಡಿದ ಮಾಜಿ ಸಿಎಂ, ಕೋವಿಡ್ ಲಸಿಕೆ ಹಾನಿಕಾರಕವಲ್ಲ ಎಂದು ಸಾಬೀತಾಗಿದೆ. ಆದರೂ ಕೆಲವರು ಮೂಢನಂಬಿಕೆ ಮತ್ತು ವದಂತಿ ಸುದ್ದಿಗಳಿಗೆ ಕಿವಿಗೊಡುತ್ತಿರುವುದರಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ವ್ಯಾಕ್ಸಿನ್ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆಯಿದೆ ಎಂದರು.
ಮುಸ್ಲಿಂ ಸಮುದಾಯದಲ್ಲಿ ಕೆಲವರು ಮಾತ್ರ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ. ಸಮಾಜದ ಸಾಮಾಜಿಕ ಕಾರ್ಯಕರ್ತರು ಅವರಲ್ಲಿ ಲಸಿಕೆ ಬಗ್ಗೆ ಅರಿವು ಮೂಡಿಸಬೇಕೆಂದು ರಾವತ್ ಹೇಳಿದ್ದಾರೆ.
ಹಗರಣ ಬೆಳಕಿಗೆ ಬಂದಿದ್ಹೇಗೆ?
ಪಂಜಾಬಿನ ಫರೀದ್‌ಕೋಟ್‌ನ ಎಲ್‌ಐಸಿ ಏಜೆಂಟ್‌ವೊಬ್ಬ ತನ್ನ ಮೊಬೈಲ್‌ಗೆ ಬಂದ ಕೊರೋನಾ ಪರೀಕ್ಷೆಯ ವರದಿಯ ಮೂಲವನ್ನು ಶೋಧಿಸಲು ಮುಂದಾಗಿದ್ದರಿಂದ ಹರಿದ್ವಾರ ಕುಂಭ ಮೇಳದ ವೇಳೆ ನಡೆದ ನಕಲಿ ಕೋರೋನಾ ಪರೀಕ್ಷೆ ಹಗರಣ ಬಯಲಾಗಿದೆ.
ವಿಪನ್ ಮಿತ್ತಲ್ ಎಂಬಾತ ಕೊರೋನಾ ಪರೀಕ್ಷೆಗೆ ಗಂಟಲು ದ್ರವದ ಮಾದರಿಯನ್ನು ನೀಡದೇ ಇದ್ದರೂ, ಅವರ ಮೊಬೈಲ್‌ಗೆ ‘ಕೊರೋನಾ ನೆಗೆಟಿವ್’ ಇರುವ ಬಗ್ಗೆ ಸಂದೇಶ ರವಾನೆ ಆಗಿತ್ತು. ಇದರಿಂದಾಗಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಅವರಿಗೆ ಅನುಮಾನ ಮೂಡಿತ್ತು.
ಈ ಬಗ್ಗೆ ಮಿತ್ತಲ್ ಮೊದಲು ಸ್ಥಳೀಯ ಜಿಲ್ಲಾಧಿಕಾರಿಗಳ ಬಳಿ ವಿಚಾರಿಸಿದ್ದರು. ಆದರೆ, ಅದನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಆ ಬಳಿಕ ಐಸಿಎಂಆರ್‌ಗೆ ಇ-ಮೇಲ್ ಮೂಲಕ ಮಿತ್ತಲ್ ದೂರು ನೀಡಿದ್ದರು.
ಆದರೆ, ಐಸಿಎಂಆರ್‌ನಿಂದಲೂ ಹೆಚ್ಚಿನ ಮಾಹಿತಿಗಳು ಲಭ್ಯವಾಗದೇ ಇದ್ದಾಗ, ಮಿತ್ತಲ್ ಆರ್‌ಟಿಐ ಅರ್ಜಿಯನ್ನು ದಾಖಲಿಸಿದ್ದರು. ಆರ್‌ಟಿಐ ತನಿಖೆಯ ವೇಳೆ ಹರಿದ್ವಾರದ ಲ್ಯಾಬ್‌ವೊಂದು ಮಿತ್ತಲ್ ಕೊರೊನಾ ಪರೀಕ್ಷೆಯ ವರದಿ ನೀಡಿರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ದೊಡ್ಡ ಮಟ್ಟದ ತನಿಖೆ ನಡೆಸಿದಾಗ 1 ಲಕ್ಷ ಜನರ ನಕಲಿ ಕೋವಿಡ್ ಪರೀಕ್ಷೆ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ.