ತಮಿಳುನಾಡು/ಕೇರಳ: ತಮಿಳುನಾಡಿನ ಅರಕ್ಕೋಣಂನ ಕೀಲವೀತಿ ಗ್ರಾಮದಲ್ಲಿ ದ್ರೌಪದಿ ಅಮ್ಮನ್ ಮತ್ತು ಮೊಂಡಿ ಅಮ್ಮನವರ ಪುರಾತನ ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಪ್ರತಿ ವರ್ಷ ಪೊಂಗಲ್ ನಂತರದ 8ನೇ ದಿನದಂದು ಮಾಯಿಲೇರು ಎಂಬ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ನಿನ್ನೆ (ಜ.22) ಮಾಯಿಲೇರು ಉತ್ಸವ ಅದ್ಧೂರಿಯಿಂದ ನಡೆಯುತ್ತಿತ್ತು. ರಾತ್ರಿ ವೇಳೆ ಭಕ್ತರು ದೇವಿಗೆ ಮಾಲೆಗಳನ್ನು ಅರ್ಪಿಸಲು ಬೆನ್ನಿಗೆ ಈಟಿ ಚುಚ್ಚಿಕೊಂಡು ಕ್ರೇನ್‌ನಲ್ಲಿ ನೇತಾಡುವ ಮೂಲಕ ಅತ್ಯಂತ ವಿಶಿಷ್ಠವಾಗಿ ಹರಕೆ ತೀರಿಸುತ್ತಿದ್ದರು. ಆದರೆ, ರಾತ್ರಿ 8.30ರ ಸುಮಾರಿಗೆ ಇದ್ದಕ್ಕಿದ್ದಂತೆ ಕ್ರೇನ್ ದಿಢೀರ್ ಧರೆಗಪ್ಪಳಿಸಿತು.
ಈ ದುರಂತದಲ್ಲಿ ಭೂಬಾಲನ್ (40), ಜ್ಯೋತಿಬಾಬು (16), ಮುತ್ತುಕುಮಾರ್ (39) ಎಂಬ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು (ಜನವರಿ 23) ತಿರುವಳ್ಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ವ್ಯಕ್ತಿ ಚಿನ್ನಸ್ವಾಮಿ (85) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಸೂರ್ಯ (22), ಗಜೇಂದ್ರನ್ (25), ಹೇಮಂತ್ ಕುಮಾರ್ (16), ಅರುಣಕುಮಾರ್ (25), ಕಥಿರವನ್ (23) ಮತ್ತು ಅರುಣಾಚಲಂ (45) ಸೇರಿದಂತೆ ಅನೇಕ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಚೆನ್ನೈನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭೀಕರ ಅಪಘಾತದ ಬಗ್ಗೆ ನೇಮಿಲಿ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅವಘಡಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. "ಕ್ರೇನ್ ಬಳಸಲು ಅನುಮತಿ ಇರಲಿಲ್ಲ. ಕ್ರೇನ್ ನಿರ್ವಾಹಕನನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಯುತ್ತಿದೆ" ಎಂದು ರಾಣಿಪೇಟೆ ಜಿಲ್ಲಾಧಿಕಾರಿ ಭಾಸ್ಕರ್ ಪಾಂಡಿಯನ್ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ವಾಸ: ಪಾಕಿಸ್ತಾನದ ಯುವತಿ, ಪ್ರಿಯತಮ ಪೊಲೀಸ್ ವಶಕ್ಕೆ
ಕೇರಳದಲ್ಲಿ ಭೀಕರ ರಸ್ತೆ ಅಪಘಾತ: ಇಲ್ಲಿನ ಆಲಪ್ಪುಳ ಜಿಲ್ಲೆಯ ಅಂಬಲಪ್ಪುಳ ಬಳಿ ಕಾರು ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಪರಿಣಾಮ, ತಿರುವನಂತಪುರಂನಲ್ಲಿರುವ ಇಸ್ರೋ ಕ್ಯಾಂಟೀನ್‌ನ ಐವರು ಗುತ್ತಿಗೆ ನೌಕರರು ಸಾವನ್ನಪ್ಪಿದ್ದಾರೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟರು. ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಘಟನೆ ನಡೆದಿದೆ ಎಂದು ಅಂಬಲಪ್ಪುಳ ಪೊಲೀಸರು ಮಾಹಿತಿ ನೀಡಿದರು.
ಮೃತರನ್ನು ತಿರುವನಂತಪುರಂನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ನೌಕರರು ಎಂದು ಪೊಲೀಸರು ಗುರುತಿಸಿದ್ದಾರೆ. ಇವರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿತು ಎಂದು ಹೇಳಿದ್ದಾರೆ.
"ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ್ದವು. ಲಾರಿ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಅಪಘಾತದ ಸ್ಥಳದಲ್ಲಿ ಐವರ ಪೈಕಿ ಒಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿರುವುದು ಕಂಡುಬಂತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದೆವು. ಆದ್ರೆ ಅವರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದರು. ಬೆಳಗಿನ ಜಾವ 1.30ರ ಸುಮಾರಿಗೆ ದುರ್ಘಟನೆ ನಡೆದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಲಪ್ಪುಳ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ" ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ: ಹೆದ್ದಾರಿ ದಾಟುತ್ತಿದ್ದಾಗ ಗುದ್ದಿದ ಟ್ರಕ್: ತಾಯಿ, ಮಗಳು ಸೇರಿ 6 ಮಂದಿ ದಾರುಣ ಸಾವು!