ಚೆನ್ನೈ (ತಮಿಳುನಾಡು): ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸ್ಥಾನದಿಂದಲೇ ರಾಜ್ಯಪಾಲ ಆರ್.ಎನ್. ರವಿ ಅವರು ಇಂದು ವಜಾಗೊಳಿಸಿದ್ದಾರೆ. ಸದ್ಯ ಸೆಂಥಿಲ್ ಬಾಲಾಜಿ ಯಾವುದೇ ಖಾತೆ ಇಲ್ಲದೆ ಸಚಿವರಾಗಿ ಮುಂದುವರಿದಿದ್ದರು. ಬಂಧನದ ಬಳಿಕ ಅವರ ಬಳಿಯಿದ್ದ ಖಾತೆಗಳನ್ನು ಸರ್ಕಾರ ಹಿಂಪಡೆದಿತ್ತು.
ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸಚಿವ ಸಂಪುಟದಿಂದ ಸೆಂಥಿಲ್ ಬಾಲಾಜಿ ಅವರನ್ನು ರಾಜ್ಯಪಾಲರು ವಜಾ ಮಾಡಿದ್ದಾರೆ. "ಸಚಿವ ವಿ. ಸೆಂಥಿಲ್ ಬಾಲಾಜಿ ಉದ್ಯೋಗಕ್ಕಾಗಿ ಹಣ ತೆಗೆದುಕೊಳ್ಳುವುದು ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ'' ಎಂದು ತಮಿಳುನಾಡು ರಾಜಭವನ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಜೂನ್ 14ರಂದು ಸೆಂಥಿಲ್ ಬಾಲಾಜಿ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಅಡಿಯಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ತನಿಖೆಯ ಸಮಯದಲ್ಲಿ ಎದೆನೋವು ಕಾಣಿಸಿಕೊಂಡು ಅವರನ್ನು ಓಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, 14 ದಿನಗಳ ಕಾಲ ಎಂದರೆ ಜುಲೈ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಜೂನ್ 15ರಂದು ರಾಜಭವನ ಮತ್ತು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ನಡುವೆ ಕಿತ್ತಾಟಕ್ಕೂ ಕಾರಣವಾಗಿತ್ತು. ಬಂಧಿತ ಸಚಿವ ಸೆಂಥಿಲ್ ಬಾಲಾಜಿ ಬಳಿಯಿದ್ದ ಖಾತೆಗಳನ್ನು ಇತರ ಇಬ್ಬರು ಸಚಿವರಿಗೆ ಹಂಚಿಕೆ ಮಾಡುವ ಸಂಬಂಧ ಸರ್ಕಾರ ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸನ್ನು ರಾಜ್ಯಪಾಲರು ಹಿಂತಿರುಗಿಸಿದ್ದರು. ಆಗ ಸಿಎಂ ಸ್ಟಾಲಿನ್ ಸೆಂಥಿಲ್ ಅವರನ್ನು ಸಚಿವ ಸ್ಥಾನವಿಲ್ಲದೇ ಉಳಿಸಿಕೊಂಡಿದ್ದರು. ರಾಜ್ಯಪಾಲರು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಸೂಚಿಸಿದ್ದರು. ವಿದ್ಯುತ್, ಇಂಧನ ಮತ್ತು ಅಬಕಾರಿ ಖಾತೆಗಳನ್ನು ಸೆಂಥಿಲ್ ಹೊಂದಿದ್ದರು.
ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಸುದ್ದಿಗೋಷ್ಠಿ ಮಾಡಿ, ರಾಜ್ಯಪಾಲರು ಬಿಜೆಪಿಯ ಹಿಟ್ ಮ್ಯಾನ್‌ನಂತೆ ವರ್ತಿಸುತ್ತಿದ್ದಾರೆ. ಅವರ ನಡೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿದೆ. ಸಚಿವರ ಖಾತೆಗಳ ಬದಲಾವಣೆಗಳನ್ನು ಸಂಪ್ರದಾಯದಂತೆ ರಾಜ್ಯಪಾಲರಿಗೆ ತಿಳಿಸಲಾಗುತ್ತದೆ. ಅದಕ್ಕೆ ಒಪ್ಪಿಗೆ ಅಗತ್ಯವಿಲ್ಲ. ಆದರೆ, ಖಾತೆಗಳ ಮರು ಹಂಚಿಕೆಗೆ ಸಂಬಂಧಿಸಿದಂತೆ ಸಿಎಂ ಶಿಫಾರಸಿನ ಕುರಿತು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಪತ್ರ ಬರೆದಿದ್ದು, ಅವರು ನೀಡಿರುವ ಕಾರಣಗಳು ತಪ್ಪುದಾರಿಗೆಳೆಯುವಂತಿವೆ ಎಂದು ದೂರಿದ್ದರು.
ಇದನ್ನೂ ಓದಿ: ಇಡಿ ಕಸ್ಟಡಿಯಲ್ಲಿರುವ ಸೆಂಥಿಲ್ ಖಾತೆ ಇಲ್ಲದೇ ಸಚಿವರಾಗಿ ಮುಂದುವರಿಯುತ್ತಾರೆ: ತಮಿಳುನಾಡು ಸರ್ಕಾರ