ಮುಂಬೈ: ಭಾರತದ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡು ಬಂದಿದ್ದು, ಶುಕ್ರವಾರ ಬೆಳಗ್ಗೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ 55 ಸಾವಿರ ಪಾಯಿಂಟ್ಗಳಷ್ಟು ತಲುಪಿದೆ. ಇಷ್ಟು ಅಂಶಗಳಿಗೆ ಏರಿಕೆ ಕಂಡಿರುವುದು ಇದು ಮೊದಲನೇ ಬಾರಿ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ 50ಯು 16,400 ಪಾಯಿಂಟ್ಗಳಷ್ಟು ತಲುಪಿದ್ದು, ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಬ್ಯಾಂಕಿಂಗ್, ಹಣಕಾಸು ಷೇರುಗಳು ನಿಫ್ಟಿಯ ಏರಿಕೆಗೆ ಸಾಕಷ್ಟು ಕೊಡುಗೆ ನೀಡಿವೆ.
ಇಂದು ವಹಿವಾಟು ಆರಂಭವಾದಾಗ ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 225 ಪಾಯಿಂಟ್ಗಳಷ್ಟು ಅಥವಾ ಶೇಕಡಾ 0.41ರಷ್ಟು ಏರಿಕೆಯಾಗಿದ್ದು, 55,068.6ರಷ್ಟು ತಲುಪಿತ್ತು. ಇದೇ ವೇಳೆ ನಿಫ್ಟಿಯು ಶೇಕಡಾ 0.36ರಷ್ಟು ಏರಿಕೆ ಕಂಡಿದ್ದು, 16,423ಕ್ಕೆ ತಲುಪಿದೆ.
ನಿಫ್ಟಿ50ಯಲ್ಲಿರುವ 50 ಕಂಪನಿಗಳಲ್ಲಿ ಸುಮಾರು 20 ಕಂಪನಿಗಳು ಬೆಳವಣಿಗೆಯ ಹಾದಿ ಹಿಡಿದರೆ, 27 ಕಂಪನಿಯ ಷೇರುಗಳು ಬೆಲೆ ಕುಸಿತವಾಗಿದೆ. ಇನ್ನು 3 ಕಂಪನಿಗಳ ಷೇರುಗಳ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಲಿಲ್ಲ.
ಹೆಚ್ಡಿಎಫ್ಸಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಗಳಲ್ಲಿ ಶೇಕಡಾ 1.3ರಷ್ಟು ಲಾಭವನ್ನು ದಾಖಲಿಸಿದ್ದು, ನಂತರ ಸ್ಥಾನಗಳಲ್ಲಿ ಕೋಲ್ ಇಂಡಿಯಾ, ಐಸಿಐಸಿಐ ಮತ್ತು ಎಲ್ ಆ್ಯಂಡ್ ಟಿ ಕಂಪನಿಗಳು ಶೇಕಡಾ 1ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ.
ಐಷರ್ ಮೋಟಾರ್ಸ್ ಆರಂಭದಲ್ಲೇ ಶೇಕಡಾ 2ರಷ್ಟು ಕುಸಿತ ಕಂಡಿದ್ದು, ಟೆಕ್ ಮಹೀಂದ್ರಾ ಮತ್ತು ಟಾಟಾ ಸ್ಟೀಲ್ ಶೇಕಡಾ 1ರಷ್ಟು ಮತ್ತು ಪವರ್ ಗ್ರಿಡ್ 0.6ರಷ್ಟು ಕುಸಿತ ಕಂಡಿದೆ. ಮಾರುಕಟ್ಟೆ ಆರಂಭವಾದ ಕೆಲವು ನಿಮಿಷಗಳಲ್ಲೇ ಕೆಲವು ಕಂಪನಿಗಳಲ್ಲಿ ಸಾಕಷ್ಟು ಸಕಾರಾತ್ಮಕ ಮತ್ತು ನಕಾರಾತ್ಮಕ ಬೆಳವಣಿಗೆಗಳು ಸಂಭವಿಸಿವೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ನಡೆದ ಘಟನೆ ಪ್ರಜಾಪ್ರಭುತ್ವದ ಕೊಲೆ: ರಾಹುಲ್ ಗಾಂಧಿ