ಬುರ್ಹಾನ್ಪುರ್ (ಮಧ್ಯಪ್ರದೇಶ): ಮುಮ್ತಾಜ್ ಬೇಗಂ ಅವರ ಕೊನೆಯ ಆಸೆಯನ್ನು ಪೂರೈಸುವ ಸಲುವಾಗಿ ಮೊಘಲ್ ಚಕ್ರವರ್ತಿ ಷಹಜಹಾನ್ ಉತ್ತರ ಪ್ರದೇಶದ ಆಗ್ರಾದಲ್ಲಿ ವಿಶ್ವವಿಖ್ಯಾತ ತಾಜ್ ಮಹಲ್ ಅನ್ನು ಕಟ್ಟಿಸಿದನು. ಇಲ್ಲೊಬ್ಬ ಮಧ್ಯಪ್ರದೇಶದ ಷಹಜಹಾನ್ ತನ್ನ ಪತ್ನಿಗೆ ತಾಜ್ ಮಹಲ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ.
ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ಶಿಕ್ಷಣ ತಜ್ಞನಾದ ಆನಂದ್ ಪ್ರಕಾಶ್ ಚೌಕ್ಸೆ ತನ್ನ ಪತ್ನಿ ಮಂಜುಷಾ ಚೌಕ್ಸೆಗೆ ಥೇಟ್ ತಾಜ್ಮಹಲ್ ಅನ್ನು ಹೋಲುವ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನಾಲ್ಕು ಬೆಡ್ ರೂಮ್, ಗ್ರಂಥಾಲಯವೂ ಇದೆ..
ಸುಮಾರು 3 ವರ್ಷಗಳ ಅವಧಿಯಲ್ಲಿ ಈ ಮನೆ ಕಾಮಗಾರಿ ಪೂರ್ಣಗೊಂಡಿದ್ದು, ಎರಡು ಮಹಡಿಗಳನ್ನು ಹೊಂದಿದೆ. ಕೆಳಮಹಡಿಯಲ್ಲಿ ಎರಡು ಮಲಗುವ ಕೋಣೆಗಳು ಮತ್ತು ಮೇಲಿನ ಮಹಡಿಯಲ್ಲಿ ಎರಡು ಮಲಗುವ ಕೋಣೆಗಳಿವೆ. ಅಷ್ಟೇ ಅಲ್ಲದೇ ವಿಶಾಲವಾದ ಹಾಲ್, ಅಡುಗೆ ಮನೆಯನ್ನು ಈ ಮನೆ ಹೊಂದಿದೆ.
ಇದಕ್ಕಿಂತ ವಿಶೇಷವಾಗಿ ಗ್ರಂಥಾಲಯ ಹಾಗೂ ಧ್ಯಾನದ ಕೊಠಡಿಗಳೂ ಈ ಮನೆಯಲ್ಲಿವೆ. ಒಮ್ಮೆ ತಾಜ್ ಮಹಲ್ ನೋಡಲು ತೆರಳಿದ್ದ ಪ್ರಕಾಶ್ ಚೌಕ್ಸೆ ದಂಪತಿ ತಾಜ್ ಮಹಲ್ ರೀತಿಯ ಮನೆ ನಿರ್ಮಾಣ ಮಾಡಬೇಕೆಂದು ನಿರ್ಧಾರ ಮಾಡಿ, ನನ್ನನ್ನು ಭೇಟಿಯಾದರು ಎಂದು ಮನೆ ನಿರ್ಮಿಸಿದ ಇಂಜಿನಿಯರ್ ಪ್ರವೀಣ್ ಚೌಕ್ಸೆ ಹೇಳಿದ್ದಾರೆ.
ನಂತರ ಪ್ರವೀಣ್ ಚೌಕ್ಸೆ ಕೂಡಾ ಆಗ್ರಾಗೆ ತೆರಳಿ, ಅಧ್ಯಯನ ನಡೆಸಿ ಬುರ್ಹಾನ್ಪುರದಲ್ಲಿ ತಾಜ್ ಮಹಲ್ ನಿರ್ಮಾಣ ಮಾಡಿದ್ದಾರೆ. ಮನೆಗೆ ನಿರ್ಮಿಸಲಾಗಿರುವ ಮಿನಾರ್ಗಳೂ ಸೇರಿದಂತೆ ಮನೆಯ ವಿಸ್ತೀರ್ಣ 90x90 ಅಡಿ ಇದ್ದು, ಮಿನಾರ್ಗಳು ಹೊರತುಪಡಿಸಿ 60x60 ಅಡಿಗಳಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. 29 ಅಡಿ ಎತ್ತರದಲ್ಲಿ ಗುಮ್ಮಟ ನಿರ್ಮಾಣ ಮಾಡಲಾಗಿದೆ.
ಬುರ್ಹಾನ್ಪುರದಲ್ಲೇ ನಿರ್ಮಾಣವಾಗಬೇಕಿತ್ತಂತೆ ತಾಜ್ಮಹಲ್!
ಮೊಘಲ್ ದೊರೆ ಷಹಜಹಾನ್ ಆಗ್ರಾದಲ್ಲಿ ತಾಜ್ ಮಹಲ್ ನಿರ್ಮಾಣ ಮಾಡಿದ್ದು, ಮೊದಲಿಗೆ ಬುರ್ಹಾನ್ಪುರದ ತಪತಿ ನದಿಯ ದಡದಲ್ಲೇ ನಿರ್ಮಾಣ ಮಾಡಲು ಯೋಜನೆ ಸಿದ್ಧಪಡಿಸಲಾಗಿತ್ತಂತೆ. ಏಕೆಂದರೆ ಮಮ್ತಾಜ್ ತನ್ನ ನಾಲ್ಕನೇ ಮಗುವಿಗೆ ಜನ್ಮ ನೀಡುವಾಗ ಇದೇ ಸ್ಥಳದಲ್ಲಿಯೇ ಮೃತಪಟ್ಟಿದ್ದಳು ಎಂದು ಇತಿಹಾಸಕಾರರಲ್ಲಿ ಕೆಲವರು ಹೇಳುವ ಮಾತು. ಆದರೆ ಕೆಲವು ಕಾರಣಗಳಿಂದಾಗಿ ಬುರ್ಹಾನ್ಪುರದಲ್ಲಿ ತಾಜ್ ಮಹಲ್ ನಿರ್ಮಾಣ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: India Covid Report: ಒಂದೂವರೆ ವರ್ಷದ ಬಳಿಕ ಭಾರತದಲ್ಲಿ ಅತಿ ಕಡಿಮೆ ಸೋಂಕಿತರು ಪತ್ತೆ