ನವದೆಹಲಿ : ಮುಂದಿನ ಐದು ವರ್ಷಗಳಲ್ಲಿ 4 ಕೋಟಿಗೂ ಹೆಚ್ಚು ಪರಿಶಿಷ್ಟ ಜಾತಿ (ಎಸ್‌ಸಿ) ವಿದ್ಯಾರ್ಥಿಗಳಿಗೆ 59 ಸಾವಿರ ಕೋಟಿ ರೂ. ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಒಟ್ಟು 59,048 ಕೋಟಿ ರೂ. ವಿದ್ಯಾರ್ಥಿನಿ ವೇತನ ನೀಡುವ ಯೋಜನೆಗೆ ಸಂಪುಟ ಅನುಮೋದನೆ ನೀಡಿದ್ದು, ಈ ಪೈಕಿ 35,534 ಕೋಟಿ ರೂ. ಅಂದರೆ, ಶೇ.60 ರಷ್ಟು ಕೇಂದ್ರ ಸರ್ಕಾರ ಭರಿಸಲಿದೆ. ಇನ್ನುಳಿದ ಹಣವನ್ನು ರಾಜ್ಯ ಸರ್ಕಾರಗಳು ಒದಗಿಸಲಿವೆ. ಇದು ಅಸ್ತಿತ್ವದಲ್ಲಿರುವ 'ಬದ್ಧ ಹೊಣೆಗಾರಿಕೆ' ವ್ಯವಸ್ಥೆಯನ್ನು ಬದಲಾಯಿಸುತ್ತದೆ ಮತ್ತು ಈ ನಿರ್ಣಾಯಕ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಹೆಚ್ಚಿನ ಪಾಲು ಇರಲಿದೆ ಎಂದು ಕೇಂದ್ರ ಸಂಪುಟದ ಹೇಳಿಕೆಯಲ್ಲಿ ತಿಳಿಸಿದೆ.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ ಯೋಜನೆಯು, ವಿದ್ಯಾರ್ಥಿಗಳಿಗೆ 11 ನೇ ತರಗತಿಯಿಂದ ಪ್ರಾರಂಭವಾಗುವ ಯಾವುದೇ ಪೋಸ್ಟ್ ಮೆಟ್ರಿಕ್ ಕೋರ್ಸ್ ಅನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ, ಸರ್ಕಾರವು ಶಿಕ್ಷಣದ ವೆಚ್ಚವನ್ನು ಭರಿಸುತ್ತದೆ. ಈ ಯೋಜನೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು, ಸಮಯೋಚಿತ ಪಾವತಿ, ಸಮಗ್ರ ಹೊಣೆಗಾರಿಕೆ, ನಿರಂತರ ಮೇಲ್ವಿಚಾರಣೆ ಮತ್ತು ಪಾರದರ್ಶಕತೆ ಕಾಪಾಡುವುದು ಮುಖ್ಯ ಅಂಶವಾಗಲಿದೆ ಎಂದು ಕೇಂದ್ರ ಸಂಪುಟ ತಿಳಿಸಿದೆ.
ಅಂದಾಜು 1.36 ಕೋಟಿ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ 10 ನೇ ತರಗತಿ ಬಳಿಕ ಶಿಕ್ಷಣ ಮುಂದುವರೆಸುತ್ತಿಲ್ಲ. ಅಂತಹ, ವಿದ್ಯಾರ್ಥಿಗಳಿಗೆ ಇಷ್ಟದ ಕೋರ್ಸ್ ಆಯ್ದು ಉನ್ನತ ಶಿಕ್ಷಣ ಪಡೆಯಲು ಪ್ರೇರೇಪಿಸುವ ಅಭಿಯಾನ ಪ್ರಾರಂಭಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ 10 ನೇ ಮಾನದಂಡವನ್ನು ಉನ್ನತ ಶಿಕ್ಷಣ ವ್ಯವಸ್ಥೆಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.