ನವದೆಹಲಿ: ಮುಸ್ಲಿಮರಲ್ಲಿ ಬಹುಪತ್ನಿತ್ವ ಮತ್ತು ನಿಖಾ ಹಲಾಲಾ ಪದ್ದತಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲು ಐದು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠವನ್ನು ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.
ಹೊಸದಾಗಿ ಐದು ನ್ಯಾಯಮೂರ್ತಿಗಳ ಪೀಠ ರಚನೆ: ಹಿಂದಿನ ಸಾಂವಿಧಾನಿಕ ಪೀಠದ ಇಬ್ಬರು ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ನಿವೃತ್ತರಾಗಿರುವುದರಿಂದ ಹೊಸದಾಗಿ ಐದು ನ್ಯಾಯಮೂರ್ತಿಗಳ ಪೀಠವನ್ನು ರಚಿಸುವ ಅಗತ್ಯವಿದೆ ಎಂದು ಪಿಐಎಲ್ ಸಲ್ಲಿಸಿರುವ ವಕೀಲ ಅಶ್ವಿನಿ ಉಪಾಧ್ಯಾಯ ಅವರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ ಪರಿಗಣಿಸಿ ಸಾಂವಿಧಾನಿಕ ಪೀಠವನ್ನು ಸ್ಥಾಪಿಸಿಸುವಂತೆ ಆದೇಶ ಹೊರಡಿಸಿದೆ.
ಐದು ನ್ಯಾಯಮೂರ್ತಿಗಳ ಪೀಠದ ಮುಂದೆ ಬಹಳ ಮುಖ್ಯವಾದ ವಿಷಯಗಳು ಬಾಕಿ ಉಳಿದಿವೆ. ನಾವು ವಿಚಾರಣೆಗೆ ಪೀಠವನ್ನು ರಚಿಸುತ್ತೇವೆ ಮತ್ತು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ ಎಂದು ಸಿಜೆಐ ಹೇಳಿದರು. ಕಳೆದ ವರ್ಷ ನವೆಂಬರ್ 2ರಂದು ಉಪಾಧ್ಯಾಯ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಕಳೆದ ವರ್ಷ ಆಗಸ್ಟ್ 30 ರಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಹೇಮಂತ್ ಗುಪ್ತಾ, ಸೂರ್ಯಕಾಂತ್, ಎಂ ಎಂ ಸುಂದರೇಶ್ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಐದು ನ್ಯಾಯಾಧೀಶರ ಪೀಠವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC), ರಾಷ್ಟ್ರೀಯ ಮಹಿಳಾ ಆಯೋಗ (NCW) ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (NCM) ಅನ್ನು PIL ಗಳಿಗೆ ಕಕ್ಷಿದಾರರನ್ನಾಗಿ ಮಾಡಿ ಅವರ ಪ್ರತಿಕ್ರಿಯೆಗಳನ್ನು ಕೇಳಿತ್ತು.
ಬಹುಪತ್ನಿತ್ವ ಮತ್ತು ನಿಖಾ ಹಲಾಲಾಅನ್ನು ಅಸಾಂವಿಧಾನಿಕ ಎಂದು ಘೋಷಿಸಲು ಕೋರಿದ್ದ ಪಿಐಎಲ್: ನ್ಯಾಯಮೂರ್ತಿ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಗುಪ್ತಾ ಕಳೆದ ವರ್ಷದ ಸೆಪ್ಟೆಂಬರ್ 23 ಮತ್ತು ಅಕ್ಟೋಬರ್ 16 ರಂದು ನಿವೃತ್ತರಾಗಿದ್ದರು, ಈಗಾಗೀ ಬಹುಪತ್ನಿತ್ವ ಮತ್ತು ನಿಖಾ ಹಲಾಲಾ ಆಚರಣೆಗಳ ವಿರುದ್ಧದ ಎಂಟು ಅರ್ಜಿಗಳನ್ನು ಆಲಿಸಲು ನ್ಯಾಯಪೀಠದ ಮರು ರಚನೆ ಮಾಡಬೇಕಾಗಿರುವುದು ಅಗತ್ಯವಾಗಿದೆ. ಉಪಾಧ್ಯಾಯ ಅವರು ತಮ್ಮ ಪಿಐಎಲ್ ನಲ್ಲಿ ಬಹುಪತ್ನಿತ್ವ ಮತ್ತು ನಿಖಾ ಹಲಾಲಾ ಅನ್ನು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಕಳೆದ ಜುಲೈ 2018 ರಲ್ಲಿ ಸುಪ್ರೀಂ ಕೋರ್ಟ್ ಮನವಿಯನ್ನು ಪರಿಗಣಿಸಿತ್ತು ಮತ್ತು ಈ ವಿಷಯವನ್ನು ಈಗಾಗಲೇ ಇದೇ ರೀತಿಯ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.
ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲಾ ಎಂದರೇನು?: ಮುಸ್ಲಿಂ ಧರ್ಮದ ಪ್ರಕಾರ ಬಹುಪತ್ನಿತ್ವವು ಮುಸ್ಲಿಂ ಪುರುಷನಿಗೆ ನಾಲ್ಕು ಹೆಂಡತಿಯರನ್ನು ಹೊಂದಲು ಅನುಮಾತಿಸಿದೆ ಇದನ್ನು ಬಹುಪತ್ನಿತ್ವ ಎಂದು ಕರೆಯುತ್ತಾರೆ. ವಿಚ್ಛೇದನದ ನಂತರ ತನ್ನ ಪತಿಯನ್ನು ಪುನಃ ಮದುವೆಯಾಗಲು ಬಯಸುವ ಮುಸ್ಲಿಂ ಮಹಿಳೆಯು ಮೊದಲು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಬೇಕು, ನಂತರ ಅ ವ್ಯಕ್ತಿಯಿಂದ ವಿಚ್ಛೇದನವನ್ನು ಪಡೆದು ಪುನಃ ಮೊದಲ ಪತಿಯನ್ನು ಮದುವೆಯಾಗಬಹುದು ಈ ಪ್ರಕ್ರಿಯೆಯನ್ನು ನಿಕಾಹ್ ಹಲಾಲಾ ಎಂದು ಕರೆಯುತ್ತಾರೆ.
ಇದನ್ನೂ ಓದಿ:ಅವಿವಾಹಿತ ಯುವತಿ 29 ವಾರಗಳ ಗರ್ಭಪಾತ ಸುರಕ್ಷಿತವಾಗಿ ನಡೆಸಬಹುದೇ?: ವರದಿ ನೀಡುವಂತೆ ಏಮ್ಸ್ಗೆ ಸುಪ್ರೀಂ ನಿರ್ದೇಶನ