ನವದೆಹಲಿ: ಮತದಾರರ ಚೀಟಿಯನ್ನು ಆಧಾರ್ಗೆ ಜೋಡಿಸಲು ಅನುವು ಮಾಡಿಕೊಡುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಅಭಯ್ ಎಸ್ ಓಕಾ ಅವರ ನೇತೃತ್ವದ ಪೀಠವು ಮಾಜಿ ಮೇಜರ್ ಜನರಲ್ ಎಸ್ ಜಿ ವೊಂಬಟ್ಕೆರೆ ಅವರು ಸಲ್ಲಿಸಿದ ಅರ್ಜಿಯನ್ನು ಹಾಗೂ ಈ ಸಂಬಂಧಪಟ್ಟಂತೆ ಬಾಕಿ ಇರುವ ವಿಷಯದೊಂದಿಗೆ ಟ್ಯಾಗ್ ಮಾಡಿದೆ.
ಅರ್ಜಿಯಲ್ಲಿ ಏನಿದೆ: ಅರ್ಜಿದಾರರು ತಮ್ಮ ಅರ್ಜಿಯಲ್ಲಿ 2019 ರ ಆಧಾರ್ ಸಂಬಂಧ ನೀಡಿದ ತೀರ್ಪಿನ ಬಗ್ಗೆ ಗಮನ ಸೆಳೆದಿದ್ದಾರೆ. ಕೆಲವು ಪ್ರಯೋಜನಗಳನ್ನು ನೀಡಬೇಕೆಂದು ಕೋರಿದರೆ ಮಾತ್ರ ಆಧಾರ್ ಕಡ್ಡಾಯ ಮಾಡಬಹುದು. ಆದರೆ ಅವರ ಹಕ್ಕುಗಳನ್ನು ನಿರಾಕರಿಸುವಂತಿಲ್ಲ ಮತ್ತು ಮತದಾನದ ಹಕ್ಕು ಅಂತಹ ಹಕ್ಕುಗಳಲ್ಲಿ ಅತ್ಯುನ್ನತವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇತರ ಎರಡು ಅರ್ಜಿಗಳನ್ನೂ ಎಸ್ ಜಿ ವೊಂಬಟ್ಕೆರೆ ಅವರು ಸಲ್ಲಿಸಿದ್ದಾರೆ. ಇವುಗಳನ್ನು ಇದೇ ಪ್ರಮುಖ ಅರ್ಜಿಯೊಂದಿಗೆ ಪಟ್ಟಿಯಲ್ಲಿ ಸಲ್ಲಿಸುವಂತೆ ನ್ಯಾಯಪೀಠ ಹೇಳಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಮತದಾನದ ಹಕ್ಕು ಅತ್ಯಂತ ಪವಿತ್ರ ಹಕ್ಕುಗಳಲ್ಲಿ ಒಂದು. ಆಧಾರ ಕಡ್ಡಾಯ ಎಂಬ ಕಾರಣಕ್ಕೆ ಆಧಾರ್ ಪಡೆಯದ ವ್ಯಕ್ತಿಗೆ ಮತದಾನದ ಹಕ್ಕನ್ನು ನಿರಾಕರಿಸುವಂತಿಲ್ಲ ಹಾಗೂ ನಿರಾಕರಿಸಬಾರದು ಎಂದು ಅವರು ವಾದಿಸಿದ್ದಾರೆ.
ನಕಲಿ ನೋಂದಣಿಗಳನ್ನು ತೆಗೆದುಹಾಕಲು ಮತ್ತು ಎರಡೆರಡು ಬಾರಿ ನೋಂದಣಿಯನ್ನು ನಿರ್ಮೂಲನೆ ಮಾಡಲು ಮತದಾರರ ಪಟ್ಟಿಯೊಂದಿಗೆ ಆಧಾರ್ ವಿವರಗಳನ್ನು ಲಿಂಕ್ ಮಾಡಲು ಅನುವು ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಹಿಂದೆ ಮತದಾರರ ನೋಂದಣಿ ನಿಯಮಗಳನ್ನು ತಿದ್ದುಪಡಿ ಮಾಡಿತ್ತು.
ಕೇಂದ್ರ ಸರ್ಕಾರದ ಈ ನಿಯಮ ತಿದ್ದುಪಡಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಈಗ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ಇದನ್ನು ಓದಿ: ವಲ್ಲಭಭಾಯಿ ಪಟೇಲ್ ಜನ್ಮದಿನ , ಏಕತಾ ಪ್ರತಿಮೆಗೆ ಮೋದಿ ಗೌರವಾರ್ಪಣೆ