ನವದೆಹಲಿ: ಮದುವೆ ಕಾನೂನುಗಳ ವಿವಿಧ ನಿಬಂಧನೆಗಳ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ಪ್ರಮುಖ ಪ್ರಕರಣಗಳು ಎಂದು ಸುಪ್ರೀಂಕೋರ್ಟ್ ಬಣ್ಣಿಸಿದೆ. ವಿಚ್ಛೇದಿತ ಸಂಗಾತಿಗಳು ಒಟ್ಟಿಗಿರಲು ಮತ್ತು ದೈಹಿಕ ಸಂಪರ್ಕ ಹೊಂದಲು ಆದೇಶ ನೀಡುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡುವ ನಿಬಂಧನೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್, ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು ಹತ್ತು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಗೌಪ್ಯತೆ ಉಲ್ಲಂಘನೆ?
ಹಿಂದೂ ವಿವಾಹ ಕಾಯ್ದೆ (ಎಚ್‌ಎಂಎ) ಸೆಕ್ಷನ್ 9 ಮತ್ತು ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 22 ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿದಾರರ ಪರವಾಗಿ ವಕೀಲ ಶೋಯೆಬ್ ಆಲಂ ವಾದ ಮಂಡಿಸಿ ಮದುವೆ ಕಾನೂನುಗಳ ಜೊತೆಗೆ, ಐಪಿಸಿಯಲ್ಲಿನ ವಿವಿಧ ನಿಬಂಧನೆಗಳನ್ನು ಸಹ ಪರಿಗಣಿಸಬೇಕಾಗಿದೆ ಎಂದು ಹೇಳಿದರು. ಗೌಪ್ಯತೆ ಹಕ್ಕಿನ ಬಗ್ಗೆ ಒಂಬತ್ತು ಸದಸ್ಯರ ನ್ಯಾಯಮಂಡಳಿಯ ತೀರ್ಪನ್ನು ಉಲ್ಲೇಖಿಸಿ ನ್ಯಾಯಾಲಯವು ಈ ವಿಷಯದಲ್ಲಿ ಅಟಾರ್ನಿ ಜನರಲ್ ವೇಣುಗೋಪಾಲ್ ಅವರ ಸಹಕಾರವನ್ನು ಕೋರಿದೆ.
ಎಚ್‌ಎಂಎ ಸೆಕ್ಷನ್ 9 ಎಂದರೇನು?
ಸೂಕ್ತ ಕಾರಣವಿಲ್ಲದೆ ದಂಪತಿಗೆ ವೈವಾಹಿಕ ಜೀವನವನ್ನು ತೊರೆದರೆ ಅವನ ಅಥವಾ ಅವಳ ವೈವಾಹಿಕ ಹಕ್ಕುಗಳನ್ನು ಪುನಃಸ್ಥಾಪಿಸಲು ನ್ಯಾಯಾಲಯವನ್ನು ಸಂಪರ್ಕಿಸುವ ಅಧಿಕಾರವನ್ನು ನೀಡುತ್ತದೆ. ಈ ವೇಳೆ ತಮ್ಮ ವಾದ ಸರಿಯಾಗಿದೆ ಎಂದು ಸಾಬೀತುಪಡಿಸಿದರೆ, ಕೋರ್ಟ್ ಈ ಸಂಬಂಧ ಆದೇಶಗಳನ್ನು ನೀಡುತ್ತವೆ.