ನವದೆಹಲಿ: ಮಹಾರಾಷ್ಟ್ರದಲ್ಲಿ 12 ಮಂದಿ ಬಿಜೆಪಿ ಶಾಸಕರನ್ನು ಒಂದು ವರ್ಷ ಅಮಾನತು ಮಾಡಿರುವುದು ಅಸಂವಿಧಾನಿಕ ಎಂದಿರುವ ಸುಪ್ರೀಂಕೋರ್ಟ್ ಸ್ಪೀಕರ್ ಅವರ ಅಮಾನತು ಆದೇಶವನ್ನು ರದ್ದು ಮಾಡಿದೆ.
ಸ್ಪೀಕರ್ ಚೇಂಬರ್‌ನಲ್ಲಿ ಸಭಾಧ್ಯಕ್ಷ ಭಾಸ್ಕರ್ ಜಾಧವ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ರಾಜ್ಯ ಸರ್ಕಾರ ಆರೋಪದ ನಂತರ 12 ಬಿಜೆಪಿ ಶಾಸಕರನ್ನು 2021ರ ಜುಲೈ 5 ರಂದು ವಿಧಾನಸಭೆಯಿಂದ ಒಂದು ವರ್ಷದವರೆಗೆ ಅಮಾನತುಗೊಳಿಸಲಾಗಿತ್ತು. ಶಾಸಕರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಮಂಡಿಸಿದ್ದರು. ಬಳಿಕ ಧ್ವನಿ ಮತದಿಂದ ನಿರ್ಣಯವನ್ನು ಅಂಗೀಕರಿಸಲಾಗಿತ್ತು.
2021ರ ಜುಲೈ 22 ರಂದು ತಮ್ಮನ್ನು ಅಮಾನತುಗೊಳಿಸಲು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ಪ್ರಶ್ನಿಸಿ ಬಿಜೆಪಿ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್ ಅರ್ಜಿದಾರರ ಪರ ತೀರ್ಪು ನೀಡಿದೆ.
12 ಅಮಾನತುಗೊಂಡಿದ್ದ ಬಿಜೆಪಿ ಶಾಸಕರು: ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಖಾಲ್ಕರ್, ಪರಾಗ್ ಅಲವಾನಿ, ಹರೀಶ್ ಪಿಂಪಲೆ, ಯೋಗೇಶ್ ಸಾಗರ್, ಜಯ್ ಕುಮಾರ್ ರಾವತ್, ನಾರಾಯಣ ಕುಚೆ, ರಾಮ್ ಸತ್ಪುಟೆ ಹಾಗೂ ಬಂಟಿ ಭಂಗ್ಡಿಯಾ
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ