ನವದೆಹಲಿ : ಪ್ರಕರಣದ ವಿಚಾರಣೆಯೊಂದರ ವೇಳೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾಗ ಶರ್ಟ್ ಧರಿಸದ ವ್ಯಕ್ತಿ ವಿಚಾರಣೆಗೆ ಹಾಜರಾಗಿದ್ದಾರೆ. ವ್ಯಕ್ತಿಯ ಈ ನಡೆಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಏಳೆಂಟು ತಿಂಗಳಿನಿಂದಲೂ ವಿಡಿಯೋ ಕಾನ್ಫರೆನ್ಸ್ ವಿಚಾರಣೆಗಳು ನಡೆಯುತ್ತಿವೆ. ಆದರೂ ಇಂಥ ಘಟನೆ ಮರುಕಳಿಸುತ್ತಿವೆ ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ. ಕೋವಿಡ್ ಉಲ್ಬಣಗೊಂಡ ಬಳಿಕ ಕೋರ್ಟ್ಗಳಿಗೆ ರಜೆ ಘೋಷಿಸಿದ ಬಳಿಕ ಸುಪ್ರೀಂಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗಳನ್ನು ನಡೆಸುತ್ತಿದೆ. ವಿಚಾರಣೆ ವೇಳೆ ಇಂಥ ಘಟನೆಗಳು ನಡೆಯುವುದು ಹೊಸದೇನಲ್ಲ.
ಅಕ್ಟೋಬರ್ 26ರಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ವ್ಯಕ್ತಿಯೊಬ್ಬರನ್ನು ವಿಚಾರಣೆ ನಡೆಸುವ ವೇಳೆ ಇದೇ ರೀತಿಯ ಘಟನೆ ನಡೆದಿತ್ತು. ವಕೀಲರೊಬ್ಬರು ಶರ್ಟ್ ಧರಿಸದೆ ಸ್ಕ್ರೀನ್ ಮೇಲೆ ಕಾಣಿಸಿದ್ದರು. ಆಗ ನ್ಯಾ.ಚಂದ್ರಚೂಡ್, ಗರಂ ಆಗಿ ನೀವು ಪರದೆಯ ಮೇಲೆ ಕಾಣಿಸಿಕೊಳ್ಳುವವರು ಜಾಗರೂಕರಾಗಿರಬೇಕು. ಇಂಥ ಘಟನೆಗಳು ಪುನರಾವರ್ತನೆಯಾಗಬಾರದು ಎಂದು ಸೂಚಿಸಿದ್ದರು.
ಜೂನ್ನಲ್ಲಿ ವಕೀಲರೊಬ್ಬರು ಸುಪ್ರೀಂಕೋರ್ಟ್ನಲ್ಲಿ ವರ್ಚುವಲ್ ವಿಚಾರಣೆ ವೇಳೆ ಹಾಸಿಗೆ ಮೇಲೆ ಮಲಗಿ ವಾದ ಮಂಡಿಸಿದ್ದರು. ಈ ಸಮಯದಲ್ಲಿ ಜಡ್ಜ್, ವಿಚಾರಣೆಯ ಸಾರ್ವಜನಿಕ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು 'ಕನಿಷ್ಠ ನ್ಯಾಯಾಲಯದ ಶಿಷ್ಟಾಚಾರವನ್ನು' ಅನುಸರಿಸಬೇಕು ಎಂದು ಲಾಯರ್ಗೆ ಸಲಹೆ ನೀಡಿದ್ದರು. ಕಳೆದ ಏಪ್ರಿಲ್ನಲ್ಲಿ ರಾಜಸ್ಥಾನ ಹೈಕೋರ್ಟ್ ವಕೀಲರೊಬ್ಬರು ಇದೇ ರೀತಿ ಮಾಡಿದ್ದರು. ಆಗ ಸಮವಸ್ತ್ರ ಧರಿಸಿ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಾಲಯ ತಿಳಿಸಿತ್ತು.