ಮಹೆಬೂಬನಗರ(ತೆಲಂಗಾಣ): ಅಧಿಕಾರದ ದರ್ಪ ಮನುಷ್ಯನನ್ನು ಏನು ಬೇಕಾದರೂ ಮಾಡಿಸುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತಮ್ಮ ಉದ್ಯೋಗದ ಬಗ್ಗೆ ಮಾಹಿತಿ ನೀಡಲು ಆರ್ಟಿಐ ಸಲ್ಲಿಸಿದ್ದ ವಿಶೇಷಚೇತನ ವ್ಯಕ್ತಿಯ ಮೇಲೆ ಗ್ರಾಮ ಪಂಚಾಯಿತಿ ಸರಪಂಚ್ ಹಲ್ಲೆ ನಡೆಸಿದ್ದಲ್ಲದೇ, ಒದ್ದು ದೌರ್ಜನ್ಯ ಮೆರೆದಿದ್ದಾರೆ.
ಮಹೆಬೂಬನಗರ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಶೇಷಚೇತನನನ್ನು ಸರಪಂಚ್ ಕಾಲಿನಿಂದ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಜಿಲ್ಲಾಧಿಕಾರಿ ಅವರು ದುರುಳ ಸರಪಂಚ್ನನ್ನು ಅವರ ಸ್ಥಾನದಿಂದ ವಜಾಗೊಳಿಸಿ ಆದೇಶಿಸಿದ್ದು, ದೂರು ಆಧರಿಸಿ ಬಂಧಿಸಲಾಗಿದೆ.
ಏನಾಯ್ತು?: ಮೆಹಬೂಬನಗರ ಜಿಲ್ಲೆಯ ಗ್ರಾಮವೊಂದರ ವಿಶೇಷಚೇತನ ವ್ಯಕ್ತಿಯೊಬ್ಬ ತಮ್ಮ ಉದ್ಯೋಗದ ಬಗ್ಗೆ ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ(ಆರ್ಟಿಐ) ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಗೋಲ್ಮಾಲ್ ನಡೆಸಿರುವ ಆರೋಪ ಹೊತ್ತಿರುವ ಸರಪಂಚ್ ಆ ವಿಶೇಷಚೇತನ ವ್ಯಕ್ತಿಯನ್ನು ಕುಟುಂಬಸ್ಥರ ಮುಂದೆಯೇ ನಿಂದಿಸಿ, ಒಯುವ ಮೂಲಕ ದರ್ಪ ತೋರಿದ್ದಾರೆ.
ಅಲ್ಲದೇ, ಅರ್ಜಿ ಸ್ವೀಕರಿಸಿದ ಅಧಿಕಾರಿಗೂ ಬಾಯಿಗೆ ಬಂದಂತೆ ಬೈದಿದ್ದಾರೆ. ಸರಪಂಚ್ನ ದುರಹಂಕಾರದ ನಡೆಯನ್ನು ಅಲ್ಲಿದ್ದ ಕೆಲವರು ವಿಡಿಯೋ ಮಾಡಿದ್ದಾರೆ. ಬಳಿಕ ಅದನ್ನು ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಬಳಿಕ ಘಟನೆ ಬೆಳಕಿಗೆ ಬರುತ್ತಿದ್ದಂತೆ ವಿಶೇಷಚೇತನರ ಸಂಘದಿಂದ ತಹಶಿಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಬಳಿಕ ದುರಹಂಕಾರಿ ಸರಪಂಚ್ ವಿರುದ್ಧ ಸಂತ್ರಸ್ತ ದೂರು ನೀಡಿದ್ದಾನೆ.
ಅಮಾನತು, ಬಂಧನ: ಇನ್ನು, ವೈರಲ್ ಆದ ವಿಡಿಯೋ ಗಮನಿಸಿದ ಎಸ್ಪಿ ಸರಪಂಚ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಇದಲ್ಲದೇ, ಸರಪಂಚ್ನನ್ನು ಜಿಲ್ಲಾಧಿಕಾರಿ ಕೆಲಸದಿಂದ ಅಮಾನತುಗೊಳಿಸಿದ್ದಾರೆ.
ಓದಿ: ನದಿಯಲ್ಲಿ ತೇಲಿಬಂದ 'ಗಂಗೆ'.. ಜನರಿಂದ 15 ದಿನದ ಹೆಣ್ಣು ಮಗುವಿನ ರಕ್ಷಣೆ