ಅಲ್ವಾರ್ (ರಾಜಸ್ಥಾನ): ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಯನ್ನು ಹತೋಟಿಗೆ ತರಲು ಭಾರತೀಯ ವಾಯುಪಡೆಯ (ಐಎಎಫ್) ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿದ್ದು, ವನ್ಯಜೀವಿಗಳು ಅಪಾಯಕ್ಕೆ ಸಿಲುಕಿವೆ.
ಅರಣ್ಯ ಪ್ರದೇಶದಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, 12 ಗಂಟೆಗಳ ಬಳಿಕ ಅಂದರೆ ಸೋಮವಾರ ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ ಹತೋಟಿಗೆ ಬಂದಿತ್ತು. ಆದರೆ, ಭಾರಿ ಗಾಳಿಯಿಂದಾಗಿ ಬೆಂಕಿ ಜ್ವಾಲೆಯು ಮತ್ತೆ ಹೊರಹೊಮ್ಮಿದೆ. ಇದರಿಂದ ಇಡೀ ಹುಲಿ ಸಂರಕ್ಷಿತ ಪ್ರದೇಶವನ್ನು ಬೆಂಕಿ ಆವರಿಸಿಕೊಂಡಿದ್ದು, ಕಾಡ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗುತ್ತಿದೆ.
ಹೀಗಾಗಿ, ಈ ಕಾಡ್ಗಿಚ್ಚು ಹತೋಟಿಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಸೇನೆ ಮತ್ತು ವಾಯುಪಡೆಯ ಸಹಕಾರ ಕೋರಿವೆ. ಅಂತೆಯೇ, ಬೆಂಕಿ ನಂದಿಸುವ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಹೆಲಿಕಾಪ್ಟರ್‌ಗಳ ಮೂಲಕ ಇಲ್ಲಿನ ಸಿಲಿಸೆರ್ ಕೆರೆಯಿಂದ ನೀರು ಎತ್ತಿ ಕಾಡಿಗೆ ಸುರಿಯಲಾಗುತ್ತಿದೆ.
ಬೆಂಕಿಯಿಂದ ಅರಣ್ಯದಲ್ಲಿ ಈಗಾಗಲೇ ವನ್ಯ ಸಂಪತ್ತಿಗೆ ಹಾನಿಯಾಗಿದೆ. ಈ ಬೆಂಕಿಯ ಕೆನ್ನಾಲಿಗೆ ಹತೋಟಿಗೆ ತರುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಅಂದಾಜು 200 ಜನರು ತೊಡಗಿಸಿಕೊಂಡಿದ್ದಾರೆ. ಹುಲಿ ಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಬೆಂಕಿ ನಂದಿಸಲು ಒತ್ತು ಕೊಟ್ಟು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸರಿಸ್ಕಾ ಅರಣ್ಯ ಪ್ರದೇಶದ ನಿರ್ದೇಶಕ ಆರ್.ಎನ್.ಮೀನಾ ತಿಳಿಸಿದ್ದಾರೆ.
ಬೆಂಕಿ ನಿಯಂತ್ರಿಸಲು ಸ್ಥಳೀಯರ ಸಹಕಾರ ಪಡೆಯಲಾಗುವುದು. ಈ ಕಾರ್ಯಾಚರಣೆಗೆ ಸರ್ಕಾರದಿಂದಲೂ ಹೆಚ್ಚಿನ ನೆರವು ಸಿಗುತ್ತಿದೆ. ಶೀಘ್ರದಲ್ಲೇ ಬೆಂಕಿ ನಿಯಂತ್ರಣಕ್ಕೆ ಬರುವ ವಿಶ್ವಾಸ ಎಂದು ಅಲ್ವಾರ್ ಹೆಚ್ಚುವರಿ ಜಿಲ್ಲಾಧಿಕಾರಿ ಸುನೀತಾ ಪಂಕಜ್ ಹೇಳಿದ್ದಾರೆ. ಇನ್ನು, ಸರಿಸ್ಕಾ ಹುಲಿ ಸಂರಕ್ಷಿತ ಅರಣ್ಯವು 800 ಚದರ ಕಿ.ಮೀ. ಪ್ರದೇಶ ಹೊಂದಿದೆ. ಇದನ್ನು ಹುಲ್ಲುಗಾವಲು, ಒಣ ಎಲೆಯುದುರುವ ಕಾಡುಗಳು, ಕಲ್ಲು-ಬಂಡೆಗಳ ಪ್ರದೇಶವನ್ನಾಗಿ ವಿಂಗಡಿಸಲಾಗಿದೆ.
ಇದನ್ನೂ ಓದಿ: ತೈಲ ಬೆಲೆ ನಿಯಂತ್ರಣ ಸರ್ಕಾರಕ್ಕೆ ಸವಾಲು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್