ಲುಧಿಯಾನ (ಪಂಜಾಬ್): ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕಾಲಿದಳದ ಮಾಜಿ ಸಚಿವ ನಿರ್ಮಲ್ ಸಿಂಗ್ ಕಹ್ಲೋನ್ ಅವರ ಸೋದರಳಿಯ ಸಂದೀಪ್ ಕಹ್ಲೋನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಳಪಡಿಸಲಾಗಿದೆ.
ಮೇ 29ರಂದು ಜವಾಹರಕೆ ಗ್ರಾಮದಲ್ಲಿ ಗಾಯಕ ಮೂಸೇವಾಲಾ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಸಂದೀಪ್ ಕಹ್ಲೋನ್ ಮತ್ತು ಸೇಲಂ ತಬರಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದಾಖಲಾಗಿರುವ ಪ್ರಕರಣಗಳ ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಸೆಕ್ಷನ್ 302 ಕೊಲೆಗೆ ಸಂಚು ಮತ್ತು ಇತರೆ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
ಪ್ರಕರಣದಲ್ಲಿ ಬಲದೇವ್ ಚೌಧರಿ ಬಂಧನದ ನಂತರ ಸತ್ಬೀರ್ ಸಿಂಗ್ ಸಂದೀಪ್ ಕಹ್ಲೋನ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆಲ ದಿನಗಳ ಹಿಂದೆ ಸಂದೀಪ್ ಕಹ್ಲೋನ್ ಅವರನ್ನು ಲುಧಿಯಾನ ಪೊಲೀಸರು ಬಂಧಿಸಿದ್ದು, ತನಿಖೆ ಚುರುಕುಗೊಂಡಿದೆ ಎಂದು ತಿಳಿದುಬಂದಿದೆ. ಲುಧಿಯಾನ ಪೊಲೀಸರ ಕ್ರೈಂ ಬ್ರ್ಯಾಂಚ್ ತಂಡ ಆರೋಪಿಯನ್ನು ಬಂಧಿಸಿದ್ದು, ಇದೀಗ ತಮ್ಮ ಕಷ್ಟಡಿಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಬುಲ್ಡೋಜರ್ ಬದಲು ಓಮ್ನಿ ಬಸ್ಗೆ ಆದೇಶಿಸಬಹುದೇ: ಸುಪ್ರೀಂಕೋರ್ಟ್ ಪ್ರಶ್ನೆ
ಸಂದೀಪ್ ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್ ಪುರಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ನಂತರ ಸಂದೀಪ್ ಕಹ್ಲೋನ್ ಲೂಧಿಯಾನದ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದರು. ಬಳಿಕ ಪೊಲೀಸರು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.