ಸೇಲಂ(ತಮಿಳುನಾಡು): ವರನಟ ಡಾ. ರಾಜ್ಕುಮಾರ್ ಅವರನ್ನ ಅಪಹರಣ ಮಾಡಿ ತಮ್ಮ ಬಂಧನದಲ್ಲಿರಿಸಿಕೊಂಡು ಕರುನಾಡನ್ನೇ ಬೆಚ್ಚಿಬೀಳಿಸಿದ್ದ ಸ್ಯಾಂಡಲ್ವುಡ್ ಸ್ಮಗ್ಲರ್ ಕಾಡುಗಳ್ಳ ವೀರಪ್ಪನ್ ಸಹೋದರ ಇಂದು ನಿಧನರಾಗಿದ್ದಾರೆ. ಹಿರಿಯ ಸಹೋದರ ಮಾದಯ್ಯನ್ ಸೇಲಂ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು
80 ವರ್ಷದ ಮಾದಯ್ಯನ್ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಸೇಲಂನ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಪಡೆದುಕೊಳ್ಳುತ್ತಿದ್ದರು. ಮೇ. 1ರಂದು ತೀವ್ರ ಎದೆನೋವಿನ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಅವರು ಸಾವನ್ನಪ್ಪಿದ್ದಾರೆ. 1987ರ ಅರಣ್ಯ ಸಿಬ್ಬಂದಿ ಚಿದಂಬರಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈರೋಡ್ನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಹೀಗಾಗಿ, ಕಳೆದ 34 ವರ್ಷಗಳಿಂದ ಜೈಲಿನಲ್ಲಿದ್ದರು. ಕೊಲೆ ಪ್ರಕರಣದಲ್ಲಿ ಮೈಸೂರಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಇವರನ್ನ ತದನಂತರ ಕೊಯಮತ್ತೂರು ಮತ್ತು ಸೇಲಂ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಸುಮಾರು ಎರಡು ದಶಕಗಳ ಕಾಲ ತಮಿಳುನಾಡು, ಕರ್ನಾಟಕ ಮತ್ತು ಕೇರಳ ಅರಣ್ಯ ಪ್ರದೇಶದಲ್ಲಿ ಸಾಮ್ರಾಜ್ಯ ಸೃಷ್ಟಿ ಮಾಡಿದ್ದ ವೀರಪ್ಪನ್ 2004ರಲ್ಲಿ ತಮಿಳುನಾಡು ಪೊಲೀಸರು ಎಸ್ಟಿಎಫ್ ಸಿಬ್ಬಂದಿ ಜೊತೆ ನಡೆಸಿದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟಿದ್ದರು.